ಸಿಎಮ್‌ ಸ್ಥಾನ ಸಿಗದೆ ಹೋದರೆ ರಾಜಕೀಯ ನಿವೃತ್ತಿ ಹೊಂದುವ ಕುರಿತು ಯೋಚಿಸಿದ್ದೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ತಮ್ಮ ಆಂತರಿಕ ಅಸಮಾಧಾನವನ್ನು ಹೊರಹಾಕಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಇತ್ತೀಚಿನ ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ಹೈಕಮಾಂಡ್ ತಮಗೆ ಮುಖ್ಯಮಂತ್ರಿ ಹುದ್ದೆಯನ್ನು ನಿರಾಕರಿಸಿದ್ದರೆ ತಾವು ರಾಜಕೀಯದಿಂದಲೇ ದೂರ ಉಳಿಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ ಸೋಮವಾರ ನಡೆದ ಸನ್ಮಾನ ಸಮಾರಂಭವೊಂದರಲ್ಲಿ ಪರಮೇಶ್ವರ್ ಅವರು ಅನೌಪಚಾರಿಕವಾಗಿ ಮಾತನಾಡುತ್ತಾ ತಮಗೆ ಮೂರು ಬಾರಿ ಸಿಎಂ ಹುದ್ದೆ ಕೈತಪ್ಪಿದ ಕುರಿತು ಬೇಸರ ವ್ಯಕ್ತಪಡಿಸಿದ್ದು, ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

“2013ರ ಚುನಾವಣೆಯಲ್ಲಿ ನಾನು ಸೋತ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲಾಯಿತು. ಒಂದು ವೇಳೆ ನಾನು ಕೊರಟಗೆರೆ ಕ್ಷೇತ್ರದಿಂದ ಗೆದ್ದಿದ್ದರೆ ನಾನೇ ಮುಖ್ಯಮಂತ್ರಿಯಾಗುತ್ತಿದ್ದೆ, ಆದರೆ ನನ್ನ ಹಣೆಬರಹದಲ್ಲಿ ಅದಿರಲಿಲ್ಲ. ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿದ್ದವು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗ ಕೆಲವು ರಾಜಕೀಯ ಅನಿವಾರ್ಯತೆಗಳಿಂದಾಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆ ಮೂಲಕ ಎರಡನೇ ಬಾರಿಗೆ ನನಗೆ ಸಿಎಂ ಆಗುವ ಅವಕಾಶ ಕೈತಪ್ಪಿತು” ಎಂದು ಪರಮೇಶ್ವರ್ ಹೇಳಿದ್ದಾರೆ.

ಮುಂದುವರಿದು ಇತ್ತೀಚಿನ ನಾಯಕತ್ವ ಬದಲಾವಣೆಯ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, “ಈ ಬಾರಿ ನನಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸವಿತ್ತು. ಆದರೆ ಯಾವ ಕಾರಣಕ್ಕೋ ಗೊತ್ತಿಲ್ಲ, ನನಗೆ ಸಿಎಂ ಸ್ಥಾನ ಸಿಗಲಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲಾಯಿತು ಮತ್ತು ನನಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಯಿತು” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

“ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಸಕ್ರಿಯ ರಾಜಕೀಯದಲ್ಲಿ ನನಗೆ ನಾಲ್ಕು ದಶಕಗಳ ಅನುಭವವಿದೆ. ನನ್ನ ಕೆಲಸವನ್ನು ಗುರುತಿಸಿ ಜನರು ನನಗೆ ಆಶೀರ್ವಾದ ಮಾಡಿದ್ದಾರೆ, ಇಲ್ಲದಿದ್ದರೆ ನಾನು ರಾಜಕಾರಣದಲ್ಲಿ ಇಷ್ಟು ದೂರ ಬರಲು ಸಾಧ್ಯವಾಗುತ್ತಿರಲಿಲ್ಲ” ಎಂದು ಆರು ಬಾರಿ ಶಾಸಕರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು