ದುಬೈ | ತಾಂತ್ರಿಕ ದೋಷದಿಂದ ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ಮಿನಿಬಸ್ ಡಿಕ್ಕಿ, ಏಳು ಭಾರತೀಯ ಕಾರ್ಮಿಕರ ಸಾವು!

ದುಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಭಾರತೀಯ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಮತ್ತೊಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದ ಕಾರಣದಿಂದಾಗಿ ರಸ್ತೆಯ ಮಧ್ಯದಲ್ಲೇ ನಿಂತಿದ್ದ ಟ್ರಕ್‌ಗೆ, ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿಬಸ್ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.

ಅಲ್ಲಿನ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ರಸ್ತೆಯಲ್ಲಿ ಟ್ರಕ್ ಇದ್ದಕ್ಕಿದ್ದಂತೆ ನಿಂತಿರುವುದು ಮತ್ತು ಅದೇ ಸಮಯದಲ್ಲಿ ಮಿನಿಬಸ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಒಂಬತ್ತು ಜನರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಐವರ ಪರಿಸ್ಥಿತಿ ಅತ್ಯಂತ ವಿಮರ್ಶಾತ್ಮಕವಾಗಿದೆ ಎಂದು ತಿಳಿದುಬಂದಿದೆ.

ಈ ದಾರುಣ ಘಟನೆಗೆ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ಮತ್ತು ದಿಗ್ಭ್ರಾಂತಿ ವ್ಯಕ್ತಪಡಿಸಿದೆ. ಭಾರತೀಯ ಅಧಿಕಾರಿಗಳು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಾನುಭೂತಿ ತಿಳಿಸಿರುವ ರಾಯಭಾರ ಕಚೇರಿಯು, ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಮೃತದೇಹಗಳನ್ನು ಭಾರತಕ್ಕೆ ತರಲು ಹಾಗೂ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಕಾನೂನು ಮತ್ತು ವೈದ್ಯಕೀಯ ನೆರವು ನೀಡಲು ಕ್ರಮ ಕೈಗೊಳ್ಳುತ್ತಿರುವುದಾಗಿ ‘ಎಕ್ಸ್’ (X) ಖಾತೆಯ ಮೂಲಕ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು