ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಯಿಲೆ ಬಿಡಿ – ಕೆ.ಎನ್. ರಾಜಣ್ಣ

ಬೆಂಗಳೂರು : ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮೊದಲ ಹಂತದ ಖಾತೆ ಹಂಚಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತದ ಸ್ಫೋಟಗೊಂಡಿದೆ. ತಮಗೆ ಸಿಕ್ಕಿರುವ ಇಲಾಖೆಗಳ ಬಗ್ಗೆ ಹಿರಿಯ ಸಚಿವರುಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿರುವುದಕ್ಕೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರು ವ್ಯಂಗ್ಯವಾಡಿದ್ದಾರೆ.

ಹೈಕಮಾಂಡ್‌ ಮುಂದೆ ಕೃಷ್ಣಬೈರೇಗೌಡ ಹಠ
ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗಲಿಲ್ಲವೆಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ನಡೆಸಿದ ರಾಜೀನಾಮೆ ಹೈಡ್ರಾಮಾ ತಣ್ಣಗಾಗುವ ಮುನ್ನವೇ, ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ತಮಗೆ ಹಂಚಿಕೆಯಾಗಿರುವ ಆಹಾರ ಖಾತೆ ಬೇಡ, ಸಹಕಾರ ಅಥವಾ ಕೃಷಿ ಖಾತೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಹಿರಿಯ ಸಚಿವ ಕೃಷ್ಣಬೈರೇಗೌಡ ಕೂಡ ತಮಗೆ ನೀಡಿರುವ ನಗರಾಭಿವೃದ್ಧಿ ಖಾತೆಯ ಬಗ್ಗೆ ಅಸಮಾಧಾನಗೊಂಡು ದೆಹಲಿ ವಿಮಾನ ಹತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ಸಂಸ್ಥೆಗಳನ್ನು ಸೇರಿಸದಿದ್ದರೆ ನಾನು ಅಧಿಕಾರ ವಹಿಸಿಕೊಳ್ಳುವುದಿಲ್ಲ ಎಂದು ಕೃಷ್ಣಬೈರೇಗೌಡ ಹಠ ಹಿಡಿದಿದ್ದಾರೆ.

ಯಾರ್ಯಾರಿಗೆ ಯಾವ್ಯಾವ ಕಾಯಿಲೆ ಇದೆಯೋ?
ಸಚಿವರುಗಳ ಈ ಖಾತೆ ಕ್ಯಾತೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆ.ಎನ್. ರಾಜಣ್ಣ, ಈಗ ಕೃಷ್ಣಬೈರೇಗೌಡರ ಸರದಿ ಬಂದಿದೆ. ಬಿಡಿಎ, ಬಿಎಂಆರ್‌ಡಿಎ ಇಲ್ಲದಿದ್ದರೆ ನಗರಾಭಿವೃದ್ಧಿ ಖಾತೆಯೇ ಬೇಡ ಎನ್ನುತ್ತಿದ್ದಾರೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ರಾಜಕೀಯ ಕಾಯಿಲೆ ಶುರುವಾಗಿದೆ. ಯಾರ್ಯಾರಿಗೆ ಯಾವ್ಯಾವ ಕಾಯಿಲೆ ಇದೆಯೋ, ಅದಕ್ಕೆ ಹೈಕಮಾಂಡ್ ನಾಯಕರು ದಿಲ್ಲಿಯಿಂದ ಯಾವ ರೀತಿಯ ಔಷಧಿಗಳನ್ನು ಕಳುಹಿಸಿಕೊಡುತ್ತಾರೋ ಕಾದು ನೋಡೋಣ ಎಂದು ಲೇವಡಿ ಮಾಡಿದರು.

ನನಗೇನೂ ಬೇಡ, ಆದರೆ ಸಮುದಾಯವಾರು ಡಿಸಿಎಂ ಅಗತ್ಯ
ಇದೇ ವೇಳೆ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗದ ಕುರಿತು ಮಾತನಾಡಿದ ರಾಜಣ್ಣ, ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಮತ್ತು ಆ ರೇಸ್‌ನಲ್ಲೂ ನಾನಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ರಾಜ್ಯದಲ್ಲಿ ಸಮುದಾಯವಾರು ಉಪಮುಖ್ಯಮಂತ್ರಿ (DCM) ಸ್ಥಾನಗಳನ್ನು ಸೃಷ್ಟಿಸಬೇಕು ಎಂಬ ತಮ್ಮ ಹಳೆಯ ವಾದವನ್ನು ಅವರು ಪುನರುಚ್ಚರಿಸಿದರು. ಪರಿಶಿಷ್ಟ ಜಾತಿ (SC), ಹಿಂದುಳಿದ ವರ್ಗಗಳು (OBC) ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನಗಳನ್ನು ನೀಡುವುದರಿಂದ ಪಕ್ಷಕ್ಕೆ ಮತ್ತು ರಾಜ್ಯದ ಸಮತೋಲನಕ್ಕೆ ಅನುಕೂಲವಾಗಲಿದೆ ಎಂದು ಅವರು ಪ್ರತಿಪಾದಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಕಳವಳ
ರಾಜ್ಯದಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ವಿಳಂಬವಾಗುತ್ತಿರುವುದರ ಕುರಿತು ಕೆ.ಎನ್. ರಾಜಣ್ಣ ತೀವ್ರ ಕಳವಳ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಆಗಸ್ಟ್ ಅಂತ್ಯದೊಳಗೆ ಗ್ರಾಮ ಪಂಚಾಯಿತಿ ಚುನಾವಣೆ ಮುಗಿಸಬೇಕಿದೆ. ಆದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದು ಬರೋಬ್ಬರಿ ಐದು ವರ್ಷಗಳೇ ಕಳೆದಿವೆ. ಈ ವಿಳಂಬದಿಂದಾಗಿ ಕೇಂದ್ರ ಸರ್ಕಾರವು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಡಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಿದ್ದ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ತಡೆಹಿಡಿದಿದೆ. ಇದು ನಮ್ಮ ರಾಜ್ಯಕ್ಕೆ ದೊಡ್ಡ ಅನ್ಯಾಯ ಎಂದು ಆಕ್ರೋಶ ಹೊರಹಾಕಿದರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಆಡಳಿತ ನಡೆಸಬೇಕೇ ಹೊರತು, ಅಧಿಕಾರಿಗಳಲ್ಲ ಎಂದು ಹೇಳುವ ಮೂಲಕ ಸ್ವಪಕ್ಷದ ಸರ್ಕಾರದ ಮೇಲೆಯೇ ಪರೋಕ್ಷವಾಗಿ ಒತ್ತಡ ಹೇರಿದರು.

Related Articles

ಇತ್ತೀಚಿನ ಸುದ್ದಿಗಳು