ಅಧಿಕಾರ ವಹಿಸಿಕೊಳ್ಳುತ್ತಲೇ ವೀಕ್ಷಕರೊಂದಿಗೆ ಮಹತ್ವದ ಸಭೆ ನಡೆಸಿದ – ಬಿ.ಕೆ. ಹರಿಪ್ರಸಾದ್

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್(B.K. Hariprasad) ಅವರು ಬುಧವಾರ ಮೊದಲ ಬಾರಿಗೆ ಬೆಂಗಳೂರಿನ(Bengaluru) ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದರು. ನೂತನ ಸಾರಥಿಯ ಮೊದಲ ಭೇಟಿಯ ಹಿನ್ನೆಲೆಯಲ್ಲಿ ಇಡೀ ಕಾಂಗ್ರೆಸ್ ಕಚೇರಿಯಲ್ಲಿ ಭಾರಿ ಸಡಗರ-ಸಂಭ್ರಮ ಮನೆಮಾಡಿತ್ತು.

ಕಚೇರಿಗೆ ಆಗಮಿಸಿದ ಬಿ.ಕೆ. ಹರಿಪ್ರಸಾದ್ ಅವರಿಗೆ ಕಾಂಗ್ರೆಸ್‌ನ ಮುಂಚೂಣಿ ನಾಯಕರು, ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂಗುಚ್ಛ ನೀಡಿ ಅತ್ಯಂತ ಅದ್ದೂರಿಯಾಗಿ ಸ್ವಾಗತಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಹಿರಿಯ ಎಂಎಲ್‌ಸಿಗಳು ಹೊಸ ಅಧ್ಯಕ್ಷರನ್ನು ಬರಮಾಡಿಕೊಂಡರೆ, ಸಚಿವ ಜಮೀರ್ ಅಹಮದ್ ಖಾನ್ ಅವರು ಕೂಡ ಕಚೇರಿಗೆ ಭೇಟಿ ನೀಡಿ ನೂತನ ಸಾರಥಿಗೆ ಆತ್ಮೀಯವಾಗಿ ಶುಭ ಹಾರೈಸಿದರು.

ಅಧಿಕಾರ ವಹಿಸಿಕೊಳ್ಳುತ್ತಲೇ ಆ್ಯಕ್ಷನ್ ಮೂಡ್: ವೀಕ್ಷಕರೊಂದಿಗೆ ಮಹತ್ವದ ಸಭೆ
ಕಚೇರಿಗೆ ಭೇಟಿ ನೀಡಿದ ಬೆನ್ನಲ್ಲೇ ಬಿ.ಕೆ. ಹರಿಪ್ರಸಾದ್ ಅವರು ಆಡಳಿತಾತ್ಮಕವಾಗಿ ಸಕ್ರಿಯರಾಗಿದ್ದು, ಮುಂಬರುವ ರಾಜಕೀಯ ಸವಾಲುಗಳನ್ನು ಎದುರಿಸಲು ಸಿದ್ಧತೆ ಆರಂಭಿಸಿದ್ದಾರೆ. ತಮ್ಮ ಮೊದಲ ಅಧಿಕೃತ ಸಭೆ ನಡೆಸಿದ ಅವರು, ಮುಂಬರುವ ಜಿಬಿಎ (GBA) ಚುನಾವಣೆಗಳ ಸಿದ್ಧತೆಯ ಕುರಿತು ಪಕ್ಷದಿಂದ ನಿಯೋಜಿಸಲಾಗಿರುವ ವಿಶೇಷ ವೀಕ್ಷಕರೊಂದಿಗೆ (Observers) ಸುದೀರ್ಘ ಸಮಾಲೋಚನೆ ನಡೆಸಿದರು.


ಪ್ರಮುಖ ನಾಯಕರ ಉಪಸ್ಥಿತಿ, ಚುನಾವಣಾ ತಂತ್ರಗಾರಿಕೆ ಚರ್ಚೆ

ಪಕ್ಷದ ಬಲವರ್ಧನೆ ಹಾಗೂ ಮುಂಬರುವ ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಕಾರ್ಯತಂತ್ರ ರೂಪಿಸುವ ಕುರಿತು ನಡೆದ ಈ ಪ್ರಮುಖ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಹಿರಿಯ ಮುಖಂಡರಾದ ನಸೀರ್ ಅಹಮದ್, ಸಲೀಂ ಅಹಮದ್, ಜಿ.ಸಿ. ಚಂದ್ರಶೇಖರ್, ಬೇಳೂರು ಗೋಪಾಲಕೃಷ್ಣ ಹಾಗೂ ಐವಾನ್ ಡಿಸೋಜ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು. ಚುನಾವಣಾ ರಣತಂತ್ರ ಹಾಗೂ ವೀಕ್ಷಕರಿಗೆ ವಹಿಸಬೇಕಾದ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು