ಪೇಪರ್ ಲೀಕ್ ವಿರುದ್ಧ ಪ್ರತಿಭಟನೆ: ಹರಿಯಾಣದಲ್ಲಿ ಸಿಜೆಪಿ ಆಂದೋಲನದಲ್ಲಿ ಪಾಲ್ಗೊಂಡಿದ್ದ ಶಿಕ್ಷಕಿ ಅಮಾನತು!

ಹರಿಯಾಣದ ರೋಹ್ಟಕ್‌ನಲ್ಲಿ ಜೂನ್ 6 ರಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸರ್ಕಾರಿ ಅತಿಥಿ ಶಿಕ್ಷಕಿಯೊಬ್ಬರನ್ನು ರಾಜ್ಯ ಸರ್ಕಾರವು ಸೇವೆಯಿಂದ ಅಮಾನತು (ಸಸ್ಪೆಂಡ್) ಮಾಡಿದೆ. ರೋಹ್ಟಕ್ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ (DEEO) ಬಿಜೇಂದರ್ ಹೂಡಾ ಅವರು ಬುಧವಾರ ಈ ಆದೇಶ ಹೊರಡಿಸಿದ್ದು, ಜೂನ್ 8 ರಿಂದಲೇ ಇದು ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಅಥವಾ ಪೂರ್ವಾನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರುಹಾಜರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಸರ್ಕಾರಿ ನೌಕರರ ನಡವಳಿಕೆ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಮಾನತುಗೊಂಡ ಶಿಕ್ಷಕಿ ಸುಲೇಖಾ ದಲಾಲ್ ಅವರು ರೋಹ್ಟಕ್‌ನ ರೈನಕ್‌ಪುರ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಅವರು, “ಅಮಾನತು ಮಾಡುವ ಮುನ್ನ ಅಥವಾ ನಂತರ ಇಲಾಖೆಯಿಂದ ನನಗೆ ಯಾವುದೇ ಅಧಿಕೃತ ಕಾರಣದ ನೋಟಿಸ್ ತಲುಪಿಲ್ಲ. ಆದರೆ ಸಿಜೆಪಿ ಆಂದೋಲನದಲ್ಲಿ ಭಾಗವಹಿಸಿದ್ದಕ್ಕೇ ನನ್ನನ್ನು ಸಸ್ಪೆಂಡ್ ಮಾಡಲಾಗಿದೆ ಎಂಬುದು ನನಗೆ ತಿಳಿಯದಾಗಿದೆ.

ನನ್ನ 21 ವರ್ಷದ ಮಗ ಹಗಲಿರುಳು ಶ್ರಮವಹಿಸಿ ಓದಿದ್ದರೂ ದೆಹಲಿ ಹೆಡ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಆ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ದೇಶದಲ್ಲಿ ನೀಟ್ (NEET) ಪರೀಕ್ಷೆಯ ಅಕ್ರಮದ ಬಗ್ಗೆ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಚರ್ಚಿಸುತ್ತಿವೆಯಾದರೂ, ಹೆಡ್ ಕಾನ್‌ಸ್ಟೆಬಲ್ ಪರೀಕ್ಷೆಯ ಪೇಪರ್ ಲೀಕ್ ಬಗ್ಗೆ ಯಾರೂ ಮಾತನಾಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾವು ಯಾವುದೇ ರಾಜಕೀಯ ಹಿನ್ನೆಲೆ ಹೊಂದಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಸುಲೇಖಾ, ಪೇಪರ್ ಲೀಕ್ ದಂಧೆಯಿಂದಾಗಿ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರಕ್ಕೆ ದೂಡಲ್ಪಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. “ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ನನಗೆ ಸೂಕ್ತ ವೇದಿಕೆ ಬೇಕಿತ್ತು, ಅದಕ್ಕಾಗಿ ನಾನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ.

ಅಲ್ಲಿ ನಾನು ಆಡಿದ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ತಾಯಿಯಾಗಿ ನೊಂದ ವಿದ್ಯಾರ್ಥಿಗಳ ಪರವಾಗಿ ನನ್ನ ಹೋರಾಟ ಮುಂದುವರಿಯಲಿದೆ. ಸರ್ಕಾರದ ಈ ಕ್ರಮಕ್ಕೆ ನಾನು ಹೆದರುವುದಿಲ್ಲ, ಇದನ್ನು ಸರ್ಕಾರದ ಕಡೆಯಿಂದ ಸಿಕ್ಕ ಸಣ್ಣ ಉಡುಗೊರೆ ಎಂದು ಸ್ವೀಕರಿಸುತ್ತೇನೆ” ಎಂದು ಅವರು ಧೀರವಾಗಿ ನುಡಿದಿದ್ದಾರೆ.

ಸುಲೇಖಾ ದಲಾಲ್ ಅವರು ಶಿಕ್ಷಕಿಯಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನವೂ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ಹಗಲಿರುಳು ಕಷ್ಟಪಟ್ಟು ಓದುವ ಮಕ್ಕಳ ನೋವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು