ಸಂಸತ್ತಿನ ಪೂರ್ವಸೂರಿಗಳು – 26: ತನ್ನ ಭಾಷಣಗಳು ಮತ್ತು ತತ್ವಗಳಿಂದಲೇ ಸ್ಮರಣೀಯರಾದ ಸಮಾಜವಾದಿ ನಾಯಕ ನಾಥ್‌ ಪೈ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತಾರನೇ ಲೇಖನ

ಸಂಸದರಾಗಿ ತನ್ನ ಮೊಟ್ಟ ಮೊದಲ ಅವಧಿಯಲ್ಲಿಯೇ ಅವರ ಪ್ರತಿಭೆ ಮತ್ತು ಅಪ್ರತಿಮ ಮಾತುಗಾರಿಕೆಯು ಎದ್ದು ಕಾಣುವಂತಿತ್ತು.

ವಕೀಲರಾಗಿದ್ದ ನಾಥ್‌ ಪೈ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅಪ್ರತಿಮ ಭಾಷಣಕಾರರೂ ಆಗಿದ್ದರು. ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಪ್ರಮುಖ ಮುಖವಾಗಿದ್ದ ಅವರು 13 ವರ್ಷಗಳ ಕಾಲ ಸಂಸದರಾಗಿದ್ದರು.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ವೆಂಗುರ್ಲಾದಲ್ಲಿ ಪೋಸ್ಟ್ ಮಾಸ್ಟರ್‌ ಒಬ್ಬರ ಕಿರಿಯ ಮಗನಾಗಿ 1922 ರಲ್ಲಿ ನಾಥ್‌ ಪೈ ಅವರ ಜನನ. ವೆಂಗುರ್ಲಾದಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಅವರು ಬೆಳಗಾವಿಗೆ ತೆರಳುತ್ತಾರೆ. 1942 ರಲ್ಲಿ ಕ್ವಿಟ್‌ ಇಂಡಿಯಾ ಹೋರಾಟದ ಸಂದರ್ಭದಲ್ಲಿ ನಾಥ್‌ ಪೈ ಮತ್ತು ಗೆಳೆಯರು ಸೇರಿಕೊಂಡು ಬೆಳಗಾವಿಯ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಅದರ ನಂತರ ತಲೆಮರೆಸಿಕೊಂಡಿದ್ದ ಅವರು ಕೊನೆಗೆ ಬಂಧಿತರಾಗಿದ್ದರು. ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಸುಮಾರು 19 ತಿಂಗಳ ಕಾಲ ಅವರು ಜೈಲಿನಲ್ಲಿ ಕಳೆದಿದ್ದರು. ಹಾಗಾಗಿ ಅವರ ಶಿಕ್ಷಣಕ್ಕೂ ತೊಡಕುಂಟಾಗಿತ್ತು. 1940 ರಲ್ಲಿ ಅವರು ಮೆಟ್ರಿಕ್ಯುಲೇಷನ್‌ ಮುಗಿಸಿದ್ದರು. 1945 ರಲ್ಲಿ ಇಂಟರ್ಮೀಡಿಯೇಟ್‌ ಕಾಲೇಜು ಮುಗಿಸುವ ಅವರು 1947 ರಲ್ಲಿ ಪದವಿ ಪಡೆಯುತ್ತಾರೆ. ಅದರ ನಂತರ ತನ್ನ 25 ನೇ ಹರೆಯದಲ್ಲಿ ಬ್ಯಾರಿಸ್ಟರ್‌ ಅಟ್‌ ಲಾ ಪೂರ್ತಿ ಮಾಡಲೆಂದು ಲಂಡನ್‌ಗೆ ತೆರಳುತ್ತಾರೆ. ಮುಂದಿನ ನಾಲ್ಕು ವರ್ಷಗಳನ್ನು ಅವರು ಅಲ್ಲಿಯೇ ಕಳೆಯುತ್ತಾರೆ.

ಲಂಡನ್ನಿನಲ್ಲಿ ಅವರು ಇಂಡಿಯನ್‌ ಮಜ್ಲಿಸ್‌ನ ಅಧ್ಯಕ್ಷರಾಗಿ ಮತ್ತು ಲೀಗ್‌ ಅಗೈನ್ಸ್ಟ್‌ ಇಂಪೀರಿಯಲಿಸಂನ ಉಪಾಧ್ಯಕ್ಷರಾಗುತ್ತಾರೆ. 1951 ರಲ್ಲಿ ಲಂಡನ್ನಿನಲ್ಲಿ “ಬ್ರಿಟಿಷ್‌ ಏಷ್ಯನ್‌ ಸೋಷಿಯಲಿಸ್ಟ್‌ ಫೆಲೋಶಿಪ್‌” ಆಯೋಜಿಸಲ್ಪಟ್ಟಾಗ ಕ್ಲೆಮೆಂಟ್‌ ಆಟ್ಲೀ ಅದರ ಅಧ್ಯಕ್ಷ ಮತ್ತು ನಾಥ್‌ ಪೈ ಉಪಾಧ್ಯಕ್ಷರಾಗುತ್ತಾರೆ. ಲೇಬರ್‌ ಪಾರ್ಟಿ ನಡೆಸುತ್ತಿದ್ದ ಸುಧಾರಿತ ಆಡಳಿತವನ್ನು ಹತ್ತಿರದಿಂದ ಕಾಣುವ ಅವರು, ಆ ಪಕ್ಷದ ಸಹಾನುಭೂತಿ ಭರಿತ ರಾಜಕಾರಣದಿಂದ ಪ್ರಭಾವಿತರಾಗುತ್ತಾರೆ. ಈ ಕಾಲದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆ ಬಹಳವೇ ಗಟ್ಟಿಗೊಳ್ಳುತ್ತದೆ.

ಸೋಷಿಯಲಿಸ್ಟ್‌ ಇಂಟರ್ನ್ಯಾಷನಲ್‌ ಸಂಘಟನೆಯ ಯುವ ಘಟಕವಾದ ಇಂಟರ್ನ್ಯಾಷನಲ್‌ ಯೂನಿಯನ್‌ ಆಫ್‌ ಸೋಷಿಯಲಿಸ್ಟ್‌ ಯೂತ್‌ 1954 ರಲ್ಲಿ ಕೋಪನ್‌ ಹೇಗನ್‌ನಲ್ಲಿ ಸಮ್ಮೇಳನ ನಡೆಸಿದಾಗ ನಾಥ್‌ ಪೈ ಅವರನ್ನು ಅದರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ನಂತರದ ನಾಲ್ಕು ವರ್ಷಗಳ ಕಾಲ ಅವರು ಆ ಸ್ಥಾನದಲ್ಲಿದ್ದರು. ಅಲ್ಲಿಯೇ ಅವರು ಆಸ್ಟ್ರಿಯಾದ ಯುವ ಸಮಾಜವಾದಿ ಕ್ರಿಸ್ಟೆಲ್‌ ಅವರನ್ನು ಭೇಟಿಯಾಗುವುದು. ನಂತರ ಅವರಿಬ್ಬರು ವಿವಾಹಿತರಾಗುತ್ತಾರೆ. ನಾಥ್‌ ಪೈ ಅವರು ಜರ್ಮನ್‌ ಮತ್ತು ಫ್ರೆಂಚ್‌ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು.

ಸಂಸದರಾಗಿ
ನಾಥ್‌ ಪೈ ಅವರು ತನ್ನ ಸಣ್ಣ ಪ್ರಾಯದಲ್ಲಿಯೇ ಉನ್ನತ ಸ್ಥಾನಕ್ಕೆ ಏರಿದ್ದರು. 1957 ರಿಂದ 1971 ರವರೆಗೆ ಸತತವಾಗಿ ಮೂರು ಅವಧಿಗೆ ಅವರು ವಿರೋಧ ಪಕ್ಷದ ಪ್ರಮುಖ ಧ್ವನಿಯಾಗಿದ್ದರು. ರಾಜಾಪುರ ಲೋಕಸಭಾ ಕ್ಷೇತ್ರದಿಂದ 1957, 1962 ಮತ್ತು 1967 ರ ಚುನಾವಣೆಗಳಲ್ಲಿ ಅವರು ಗೆದ್ದಿದ್ದರು.

ಸಂಸದರಾಗಿ ತನ್ನ ಮೊಟ್ಟ ಮೊದಲ ಅವಧಿಯಲ್ಲಿಯೇ ಅವರ ಪ್ರತಿಭೆ ಮತ್ತು ಅಪ್ರತಿಮ ಮಾತುಗಾರಿಕೆಯು ಎದ್ದು ಕಾಣುವಂತಿತ್ತು. 1957 ರಲ್ಲಿ ಲೋಕಸಭೆಯಲ್ಲಿ ತನ್ನ ಚೊಚ್ಚಲ ಭಾಷಣ ಮಾಡುವ ಪೈ ಅವರನ್ನು ಸ್ವತಃ ಸ್ಪೀಕರ್‌ ಸರ್ದಾರ್‌ ಹುಕುಂ ಸಿಂಗ್‌ ಅವರು ಅಭಿನಂದಿಸಿದ್ದರು. ಅವರ ಭಾಷಣದಿಂದ ಪ್ರಭಾವಿತರಾಗಿದ್ದ ಪ್ರಧಾನಿ ನೆಹರೂ, ಅವರನ್ನು ತನ್ನ ಕೊಠಡಿಗೆ ಕರೆಸಿಕೊಂಡು ಧ್ವನಿಯಿಲ್ಲದ ಜನರಿಗೆ ಧ್ವನಿಯಾಗಲು ಮತ್ತು ಅಂಚಿಗೆ ತಳ್ಳಲ್ಪಟ್ಟವರ ಆಸರೆಯಾಗಲು ಲೋಕಸಭೆಯನ್ನು ವೇದಿಕೆಯಾಗಿ ಬಳಸಿಕೊಳ್ಳಬೇಕೆಂದು ಹೇಳಿದ್ದರು. ಬೆಳಗಿನ ಉಪಹಾರಕ್ಕೆ ನೆಹರೂ ಅವರು ಪೈಯನ್ನು ಆಮಂತ್ರಿಸುತ್ತಿದ್ದರು. ಯುವ ಸಂಸದರೊಂದಿಗೆ ನೆಹರೂ ಹಲವಾರು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಚರ್ಚಿಸುತ್ತಿದ್ದರು.

ನಮ್ಮ ಲೋಕಸಭೆಯ ಕುರಿತು ಅಧ್ಯಯನ ನಡೆಸುವ ವಿದ್ವಾಂಸರುಗಳ ಪ್ರಕಾರ, ಒಟ್ಟು ಸಾಮರ್ಥ್ಯ ಮತ್ತು ಕಾರ್ಯದಕ್ಷತೆಯನ್ನು ಮಾನದಂಡನವಾಗಿ ಪರಿಗಣಿಸುವುದೇ ಆದರೆ, ಮೂರನೇ ಮತ್ತು ನಾಲ್ಕನೇ ಲೋಕಸಭೆಗಳು ಭಾರತೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದವು. ಹಿರೇನ್ ಮುಖರ್ಜಿ, ಎ.ಕೆ. ಗೋಪಾಲನ್, ಇಂದ್ರಜಿತ್ ಗುಪ್ತಾ, ಆಚಾರ್ಯ ಕೃಪಲಾನಿ, ನಾಥ್ ಪೈ, ರಾಮಮನೋಹರ ಲೋಹಿಯಾ, ಮಿನೂ ಮಸಾನಿ, ಮಧು ಲಿಮಾಯೆ, ಅಟಲ್ ಬಿಹಾರಿ ವಾಜಪೇಯಿ, ಪಿಲೂ ಮೋದಿ ಮತ್ತಿತರ ದಿಗ್ಗಜರು ಆ ಕಾಲದಲ್ಲಿ ವಿರೋಧ ಪಕ್ಷದಲ್ಲಿದ್ದರು. ಟ್ರೆಷರಿ ಬೆಂಚ್‌ಗಳನ್ನು ಅತಿ ಕಠಿಣ ವಿಮರ್ಶೆಗೆ ಒಳಪಡಿಸುವಲ್ಲಿ ನಾಥ್‌ ಪೈ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.

“ನಾಥ್‌ ಪೈ ವಿದೇಶಾಂಗ ನೀತಿಯ ಬಗ್ಗೆ ತನ್ನ ವಾದ ಮಂಡಿಸುವಾಗ ಸದನವು ಮಂತ್ರಮುಗ್ದವಾಗಿತ್ತು.” ಎಂದು ಪತ್ರಕರ್ತ ಎಚ್‌.ಕೆ. ದುವಾ ಹೇಳುತ್ತಾರೆ. ಕೆಲವರು ಸಂಸತ್ತಿನಲ್ಲಿ ಅವರು ಮಾಡುವ ಭಾಷಣಗಳನ್ನು ಸುಂದರವಾದ ಸಭೆ ಎಂಬರ್ಥದ “ಇಕೆಬಾನಾ” ಎಂದು ಕರೆಯುತ್ತಿದ್ದರು. 2012 ಏಪ್ರಿಲ್‌ 17 ರಂದು ದಿ ಹಿಂದೂ ಪತ್ರಿಕೆಯಲ್ಲಿ ಗೋಪಾಲಕೃಷ್ಣ ಗಾಂಧಿ ಅವರು ನಾಥ್‌ ಪೈ ಅವರ ಭಾಷಣಗಳ ಕುರಿತು “ಬಿಚ್ಚನೆ ಹಳಿಯುವುದು” ಎಂಬ ಪದ ಬಳಸಿದ್ದರು. ಪತ್ರಕರ್ತರೊಬ್ಬರು ಅವರನ್ನು “ನೆಹರೂಗೆ ತಕ್ಕ ಶಾಸ್ತಿ” ಎಂಬರ್ಥದಲ್ಲಿ ಗುರುತಿಸಿದ್ದರು. ಆದರೆ ಈ ಶಾಸ್ತಿ ಮಾತ್ರ ಕ್ರೂರವಾಗಿರಲಿಲ್ಲ. ಸೌಮ್ಯವೂ ದ್ವೇಷರಹಿತವೂ ಆಗಿತ್ತದು. ಸ್ವತಃ ನೆಹರೂ ಪೈ ಅವರನ್ನು “ಸಜ್ಜನ ರಾಜಕಾರಣಿ” ಎಂದು ಕರೆದಿದ್ದರು.

ಪೈ ಅವರು ಇಂಗ್ಲಿಷ್‌ ಮಾತ್ರವಲ್ಲದೆ ಮರಾಠಿಯಲ್ಲೂ ಅತ್ಯುತ್ತಮ ಭಾಷಣಗಾರರೆಂದು ಹೆಸರು ಪಡೆದಿದ್ದರು.

1962 ರ ಚೀನಾ ಆಕ್ರಮಣದ ಕುರಿತ ಚರ್ಚೆಯಲ್ಲಿ ಪೈ ಅವರು ಹೀಗೆ ಹೇಳಿದ್ದರು, “ನಮ್ಮ ಕೆಲವು ನಾಯಕರಿಗೆ ಇಚ್ಛಾಶಕ್ತಿ ಹೆಪ್ಪುಗಟ್ಟಿತ್ತು. ನಾಡಿಗಳಲ್ಲಿ ಭಾವನಾತ್ಮಕತೆಯು ಆವರಿಸಿತ್ತು. ನಮ್ಮ ದೇಶಕ್ಕೆ ಬಂದೆರಗಿದ ಈ ಎಲ್ಲ ಆಪತ್ತುಗಳಿಗೆ, ದುರಾದೃಷ್ಟಕ್ಕೆ ಮತ್ತು ದುರಂತಕ್ಕೆ ಇದುವೇ ಕಾರಣವಾಗಿತ್ತು.”

ಪೈ ಅವರು ಸಂಸತ್ತಿನಲ್ಲಿ ಹಲವು ಖಾಸಗಿ ಮಸೂದೆಗಳನ್ನು ಮಂಡಿಸಿದ್ದರು. ರಾಜ್ಯಗಳ ಭಾಷಾವಾರು ಪುನರ್ವಿಂಗಡಣೆಗೆ ಸಂಬಂಧಿಸಿದ ಹಾಗೆ ಕೆಲವು ಕುಂದು ಕೊರತೆಗಳನ್ನು ಪರಿಹರಿಸಲು ಒಂದು ಶಾಶ್ವತ ಆಯೋಗವನ್ನು ಸ್ಥಾಪಿಸುವ ಕುರಿತು ಮಸೂದೆಯೊಂದನ್ನು ಅವರು ಮಂಡಿಸಿದ್ದರು. ರಾಜ್ಯಪಾಲರ ನೇಮಕಾತಿಗೆ ಬೇಕಾದ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಮಸೂದೆಯನ್ನು ಸಹ ಅವರು ಮಂಡಿಸಿದ್ದರು. 1970 ಆಗಸ್ಟ್ 28 ರಂದು, ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯದಲ್ಲಿ “ಉದ್ಯೋಗದ ಹಕ್ಕನ್ನು” ಸೇರಿಸುವ ಮಸೂದೆಯನ್ನು ಅವರು ಮಂಡಿಸಿದ್ದರು. ಒಂದು ವೇಳೆ “ತುರ್ತು ಪರಿಸ್ಥಿತಿ” ಬಂದರೆ, ಆಗ ಅಧಿಕಾರದ ದುರುಪಯೋಗದ ಸಾಧ್ಯತೆಯನ್ನು ಮನಗಂಡಿದ್ದ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಒಂದು ಮಸೂದೆಯನ್ನು ಅವರು ಮುಂದಿಟ್ಟಿದ್ದರು. ಅವರು ವಿದೇಶಾಂಗ ವ್ಯವಹಾರಗಳಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿದ್ದರಾದರೂ ಅವರು ಮಂಡಿಸಿದ ಸಂವಿಧಾನ ತಿದ್ದುಪಡಿ ಮಸೂದೆಯಿಂದ ಬಹಳ ಹೆಸರುವಾಸಿಯಾಗಿದ್ದರು.

ಸಂಸತ್ತು ಮತ್ತು ಸುಪ್ರೀಂ ಕೋರ್ಟ್‌ ನಡುವಿನ ಆಸ್ತಿ ಹಕ್ಕುಗಳ ಕುರಿತ ಜಟಾಪಟಿ ಯಾವುದೇ ಕಾನೂನು ವಿದ್ಯಾರ್ಥಿಗೂ ಗೊತ್ತಿರುತ್ತದೆ. ಹೆನ್ರಿ ಮತ್ತು ವಿಲಿಯಂ ಗೋಲಕ್‌ ನಾಥ್‌ ಅವರ ಕುಟುಂಬವು ಸುಮಾರು 500 ಎಕರೆಯಷ್ಟು ಕೃಷಿ ಭೂಮಿಯನ್ನು ಹೊಂದಿತ್ತು. ಆದರೆ 1953 ರ ಪಂಜಾಬ್‌ ಸೆಕ್ಯೂರಿಟಿ ಆಂಡ್‌ ಲ್ಯಾಂಡ್‌ ಟೆನ್ಯೂರ್ಸ್‌ ಆಕ್ಟ್‌ ಪ್ರಕಾರ ಕುಟುಂಬದ ಸದಸ್ಯರಿಗೆ ತಲಾ 30 ಎಕರೆಗಿಂತ ಭೂಮಿಯ ಹಕ್ಕು ಇರಲಿಲ್ಲ. ಉಳಿದ ಭೂಮಿಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡಿತ್ತು. ಭೂಮಿಯನ್ನು ಹೊಂದುವ ತಮ್ಮ ಸಾಂವಿಧಾನಿಕ ಹಕ್ಕನ್ನು ಪಂಜಾಬಿನಲ್ಲಿ ಮೊಟಕುಗೊಳಿಸಲಾಗಿದೆ ಎಂದು ಗೋಲಕ್‌ ನಾಥ್‌ ಕುಟುಂಬವು ಆ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತು. 1967 ಫೆಬ್ರವರಿ 27 ರಂದು ಸಂಸತ್ತಿಗೆ ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ತರುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತು. ಆ ಮೂಲಕ ಅವರ ಆಸ್ತಿಯ ಹಕ್ಕನ್ನು ರಕ್ಷಿಸಿತು.

ಅದರ ನಂತರ, 1967 ಏಪ್ರಿಲ್‌ 7 ರಂದು ಪೈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುತ್ತಾರೆ. ಅದರಲ್ಲಿ ಸುಪ್ರೀಂ ಕೋರ್ಟಿನ ಆದೇಶವನ್ನು ರದ್ದುಗೊಳಿಸಿ ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ಮಾಡುವ ಅವಕಾಶವನ್ನು ಸಂಸತ್ತಿನ ಸುಪರ್ದಿಗೆ ತರುತ್ತಾರೆ.

ಮಸೂದೆಯನ್ನು ಸದನದಲ್ಲಿ ಮತ್ತು ಆಯ್ಕೆ ಸಮಿತಿಯಲ್ಲಿಯೂ ಚರ್ಚಿಸಲಾಗುತ್ತದೆ. ಈ ಚರ್ಚೆಗಳು ಪೈ ಅವರ ಪಾಂಡಿತ್ಯವನ್ನು ಜಾಹೀರು ಮಾಡುತ್ತವೆ. ಕೆಲವು ವಿಮರ್ಶಕರು ಈ ಮಸೂದೆ ಅಂಗೀಕಾರವಾದರೆ ಸರ್ವಾಧಿಕಾರಕ್ಕೆ ಬಾಗಿಲು ತೆರೆದು ಕೊಟ್ಟಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅದಕ್ಕೆ ಪೈ ನೀಡಿದ ಉತ್ತರ ಹೀಗಿತ್ತು:
“ಇಲ್ಲಿ ಸರ್ವಾಧಿಕಾರ ಬರುವುದನ್ನು ತಡೆಯಲು ಸಾಧ್ಯವಿರುವುದು ಸುಪ್ರೀಂ ಕೋರ್ಟ್‌ ಇರುವ ಕಾರಣಕ್ಕಲ್ಲ. ಬದಲಿಗೆ ನನ್ನ ದೇಶವಾಸಿಗಳು ಪ್ರಜಾಪ್ರಭುತ್ವಕ್ಕೆ ಬದ್ಧರಾಗಿರುವುದರಿಂದ. ನಾವು ಪ್ರಜಾಪ್ರಭುತ್ವವಾಗಿಯೇ ಉಳಿಯುತ್ತೇವೆ. ಅದು ಬಹುಷ ನ್ಯಾಯಾಲಯದ ಕೃಪೆ ಅಥವಾ ವ್ಯಾಖ್ಯಾನದ ಕಾರಣದಿಂದ ಅಲ್ಲ.”

ಪೈ ಅವರ ಈ ರಾಜಕೀಯ ಭವಿಷ್ಯವಾಣಿಯು ನಂತರದಲ್ಲಿ ಸಾಬೀತಾಯಿತು.
ಕೊನೆಗೆ, ಆಗಿನ ಸರ್ಕಾರವು ಡಿಸೆಂಬರ್ 10, 1968 ರಂದು ಪೈ ಮಂಡಿಸಿದ ಮಸೂದೆಯನ್ನು ಅಂಗೀಕರಿಸುತ್ತದೆ. ಅದಾಗಲೇ ನೀಡಿದ್ದ ಭರವಸೆಯಂತೆ ಮಸೂದೆಯನ್ನು ಸರಕಾರ ಬೆಂಬಲಿಸಬೇಕೆಂದು ಸಚಿವ ಸಂಪುಟ ಸಭೆ ತೀರ್ಮಾನಿಸುತ್ತದೆ.

ಪೈ ಒಬ್ಬ ಪ್ರಜಾಪ್ರಭುತ್ವವಾದಿ ಮಾತ್ರವಲ್ಲ, ಅವರೊಬ್ಬ ಸಮಾಜವಾದಿಯೂ ಆಗಿದ್ದರು. ಅವರು ಅಂಚೆ ನೌಕರರ ಸಂಘ ಮತ್ತು ಉತ್ತರ ರೈಲ್ವೆ ಕಾರ್ಮಿಕರ ಸಂಘದ ನಾಯಕರಾಗಿದ್ದರು. 1960 ರಲ್ಲಿ ಕೇಂದ್ರ ಸರ್ಕಾರಿ ನೌಕರರ ಮುಷ್ಕರದ ನೇತೃತ್ವವನ್ನೂ ಅವರು ವಹಿಸಿದ್ದರು. ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತಗೊಳಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಕೊಂಕಣ ಪ್ರದೇಶದ ಒಟ್ಟು ಅಭಿವೃದ್ಧಿಯ ಭಾಗವಾಗಿ “ಕೊಂಕಣ ರೈಲ್ವೇ”ಯ ಕನಸು ಕಂಡವರು ಪೈ. ಸಂಸದರಾಗಿದ್ದುಕೊಂಡು ಅವರು ಅದಕ್ಕಾಗಿ ದನಿಯೆತ್ತಿದ್ದರು. ಭಾರತದ ಪಶ್ಚಿಮ ಕರಾವಳಿ ರೈಲು ಮಾರ್ಗಕ್ಕಾಗಿ ನಿರಂತರವಾಗಿ ದನಿಯೆತ್ತಿದವರು ಕೂಡ ಹೌದು.

ಅವರ ಕನಸು ಕೈಗೂಡುವುದು 1970 ರಲ್ಲಿ. ಆಗಿನ ರೈಲ್ವೇ ಸಚಿವರಾಗಿದ್ದ ಗೋವಿಂದ ಮೆನನ್‌ ಅವರು “ಆಪ್ಟಾ-ಮಂಗಳೂರು” ನಡುವೆ ರೈಲು ಮಾರ್ಗದ ಕುರಿತಾಗಿ ಸರ್ವೇ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆಯೆಂದೂ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದೆಂದೂ ಪೈ ಅವರಿಗೆ ಪತ್ರ ಬರೆದಿದ್ದರು. ನಂತರ 1977 ರಲ್ಲಿ ಪೈ ಅವರ ರಾಜಕೀಯ ಉತ್ತರಾಧಿಕಾರಿಯಂತಿದ್ದ ಮಧು ದಂಡಾವತೆ ಅವರು ರೈಲ್ವೇ ಸಚಿವರಾಗಿದ್ದಾಗ ಕೊಂಕಣ ರೈಲ್ವೇ ಕಾರ್ಯರೂಪಕ್ಕೆ ಬರುತ್ತದೆ.

ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡನೆಯಾದಾಗ, ಬೆಳಗಾವಿಯ ಮರಾಠೀ ಭಾಷಿಗರ ಒತ್ತಾಯದಂತೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸದೆ ಕರ್ನಾಟಕಕ್ಕೆ ಸೇರಿಸಲಾಗಿತ್ತು. ಅವರ ಪರವಾಗಿ ವಾದಿಸುವ ಪೈ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೋರಾಟ ನಡೆಸುತ್ತಾರೆ.

ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಪೊಲೀಸ್‌ ಗುಂಡೇಟಿಗೆ ಕೆಲವು ಮರಾಠಿ ಹೋರಾಟಗಾರರು ಸಾವನ್ನಪ್ಪಿದ್ದರು. ಜನವರಿ 17, 1971 ರ ಆ ಹುತಾತ್ಮರ ದಿನದಂದು ಪೈ ತಮ್ಮ ಅನಾರೋಗ್ಯದ ಹೊರತಾಗಿಯೂ, ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿಕೊಂಡು ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸುಮಾರು ಒಂದು ಗಂಟೆ ಕಾಲ ಮಾತನಾಡುತ್ತಾರೆ. ಅಲ್ಲಿ ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮರಾಠಿ ಭಾಷಿಕ ಜನರು ತನ್ನ ಮೇಲೆ ಸುರಿಸಿದ ಪ್ರೀತಿ ಮತ್ತು ಮಮತೆಯ ಋಣವನ್ನು ತಾನು ತೀರಿಸಿದ್ದೇನೆ ಎಂದು ಹೇಳುವ ಅವರು, ವೇದಿಕೆಯಲ್ಲಿ ಕುಸಿದು ಬೀಳುತ್ತಾರೆ. ಮರುದಿನ, ಅಂದರೆ ಜನವರಿ 18, 1971 ರಂದು ಅವರು ನಿಧನರಾಗುತ್ತಾರೆ. ಬರಲಿದ್ದ ಸಾರ್ವತ್ರಿಕ ಚುನಾವಣೆಯ ಕೆಲವೇ ದಿನಗಳ ಮೊದಲು ತಮ್ಮ 48 ನೇ ವಯಸ್ಸಿನಲ್ಲಿ ಹೀಗೆ ಅವರು ತನ್ನ ಯಾತ್ರೆ ಮುಗಿಸುತ್ತಾರೆ. ಸಮಾಜವಾದಿ ಗೆಳೆಯರಾಗಿದ್ದ ಮಧು ದಂಡಾವತೆ ನಂತರದಲ್ಲಿ ರಾಜಾಪುರ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗುತ್ತಾರೆ.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು