ಜಗತ್ತಿನ ಮೊಟ್ಟಮೊದಲ ಟ್ರಿಲಿಯನೇರ್ ಆದ ಎಲಾನ್ ಮಸ್ಕ್; ಸ್ಪೇಸ್‌ಎಕ್ಸ್ ಐಪಿಒ ಹೊಸ ದಾಖಲೆ

ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಜಗತ್ತಿನ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್ ಎಂಬ ಅಪೂರ್ವ ದಾಖಲೆಗೆ ಪಾತ್ರರಾಗಿದ್ದಾರೆ. ಅವರ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್ ಎಕ್ಸ್ ನಡೆಸಿದ ಐತಿಹಾಸಿಕ ಐಪಿಒ (Initial Public Offering) ಯಶಸ್ಸಿನ ಬಳಿಕ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯವು 1.1 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಎಂದು ವರದಿಯಾಗಿದೆ.

ಸ್ಪೇಸ್‌ಎಕ್ಸ್ ನಾಸ್ದಾಕ್ ಷೇರು ಮಾರುಕಟ್ಟೆಯಲ್ಲಿ “SPCX” ಸಂಕೇತದಡಿ ವಹಿವಾಟು ಆರಂಭಿಸಿದ್ದು, ಪ್ರತಿ ಷೇರಿಗೆ 135 ಡಾಲರ್ ದರ ನಿಗದಿಪಡಿಸಿ ಒಟ್ಟು 555.6 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದೆ. ಇದರ ಮೂಲಕ ಕಂಪನಿಯು ಸುಮಾರು 75 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದ್ದು, ಇದು ಜಾಗತಿಕ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎಂದು ದಾಖಲಾಗಿದೆ.

ಐಪಿಒ ಬಳಿಕ ಸ್ಪೇಸ್‌ಎಕ್ಸ್ ಷೇರುಗಳು ಮೊದಲ ದಿನವೇ ಭಾರೀ ಏರಿಕೆ ಕಂಡು ಕಂಪನಿಯ ಮೌಲ್ಯವು 2 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ. ಕಂಪನಿಯಲ್ಲಿ ಸುಮಾರು 82 ಶೇಕಡಾ ಪಾಲುದಾರಿಕೆ ಹೊಂದಿರುವ ಮಸ್ಕ್ ಅವರ ಸಂಪತ್ತಿನಲ್ಲಿ ಭಾರೀ ಏರಿಕೆ ಕಂಡಿದ್ದು, ಅವರ ನಿವ್ವಳ ಆಸ್ತಿ ಮೌಲ್ಯವು 1.1 ಟ್ರಿಲಿಯನ್ ಡಾಲರ್ ತಲುಪಿದೆ.

ಈ ಬೆಳವಣಿಗೆಯೊಂದಿಗೆ ಮಸ್ಕ್ ಅವರು ವಿಶ್ವದ ಇತರ ಶ್ರೀಮಂತರನ್ನು ಬಹಳ ಹಿಂದಿಕ್ಕಿದ್ದಾರೆ. ಗೂಗಲ್ ಸಹ-ಸ್ಥಾಪಕ ಲ್ಯಾರಿ ಪೇಜ್ ಸೇರಿದಂತೆ ವಿಶ್ವದ ಪ್ರಮುಖ ಶ್ರೀಮಂತರಿಗಿಂತಲೂ ಮಸ್ಕ್ ಅವರ ಆಸ್ತಿ ಹಲವು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಐಪಿಒ ಯಶಸ್ಸಿನಿಂದಾಗಿ ಸ್ಪೇಸ್‌ಎಕ್ಸ್‌ನ ಸಾವಿರಾರು ಉದ್ಯೋಗಿಗಳಿಗೂ ಲಾಭವಾಗಿದ್ದು, ಸುಮಾರು 4,400ಕ್ಕೂ ಹೆಚ್ಚು ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳು ಮಿಲಿಯನೇರ್‌ಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಭವಿಷ್ಯದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಜಾಲದ ವಿಸ್ತರಣೆ, ಸ್ಟಾರ್‌ಶಿಪ್ ಯೋಜನೆ ಹಾಗೂ ಬಾಹ್ಯಾಕಾಶ ಆಧಾರಿತ ಎಐ ಮೂಲಸೌಕರ್ಯ ನಿರ್ಮಾಣಕ್ಕಾಗಿ ಅಗತ್ಯವಿರುವ ಬಂಡವಾಳ ಸಂಗ್ರಹಿಸುವ ಉದ್ದೇಶದಿಂದ ಕಂಪನಿಯನ್ನು ಸಾರ್ವಜನಿಕ ವಲಯಕ್ಕೆ ತರಲಾಗಿದೆ ಎಂದು ಮಸ್ಕ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು