ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಪ್ರತಿಭಟನೆ: ಬ್ರಿಟಿಷ್ ಜನತಾ ಪಾರ್ಟಿ ನಮಗೆ ಬೇಡ ಎಂದ ಯುವಕರು; ಪ್ರಕಾಶ್ ರಾಜ್, ವಾಂಗ್‌ಚುಕ್ ಭಾಗಿ!

ಬೆಂಗಳೂರು: ದೇಶದಲ್ಲಿ ಭಾರಿ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಇತ್ತೀಚಿನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಪರೀಕ್ಷೆಗಳ ಅಕ್ರಮಗಳು, ನೀಟ್ (NEET) ಪೇಪರ್ ಲೀಕ್ ಹಗರಣ ಹಾಗೂ ನಿರುದ್ಯೋಗ ಸಮಸ್ಯೆಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಯುವಜನತೆ ಇಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದರು.

ಈ ಆಂದೋಲನದಲ್ಲಿ ಸಿಜೆಪಿ ಸಂಸ್ಥಾಪಕ ಅಧ್ಯಕ್ಷ ಅಭಿಜೀತ್ ದಿಪ್ಕೆ, ಖ್ಯಾತ ಪರಿಸರವಾದಿ ಸೋನಮ್ ವಾಂಗ್‌ಚುಕ್ ಹಾಗೂ ಜನಪ್ರಿಯ ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ಯುವ ಪೀಳಿಗೆಯ ಹೋರಾಟಕ್ಕೆ ಸಾಥ್ ನೀಡಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಸಾವಿರಾರು ಯುವಕರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಳ್ಳ ಹಿಡಿಸಿರುವ ಎನ್‌ಟಿಎ (NTA) ಸಂಸ್ಥೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಘೋಷಣೆಗಳನ್ನು ಕೂಗಿದರು.

ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, “ಇದು ಭಾರತೀಯರ ಪಕ್ಷವಲ್ಲ, ಬ್ರಿಟಿಷರಿಗಿಂತಲೂ ಭೀಕರವಾಗಿ ದೇಶದ ಯುವಕರನ್ನು ಪೀಡಿಸುತ್ತಿದೆ” ಎಂದು ಆಕ್ರೋಶ ಹೊರಹಾಕಿದರು. “ಬ್ರಿಟಿಷ್ ಜನತಾ ಪಾರ್ಟಿ (ಬಿಜೆಪಿ) ನಮಗೆ ಇನ್ನು ಬೇಡ” ಎಂದು ಬರೆದಿದ್ದ ನೂರಾರು ಪ್ಲಕಾರ್ಡ್‌ಗಳನ್ನು ಹಿಡಿದು ಯುವಕರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಪ್ರದರ್ಶಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, “ದೇಶವನ್ನು ರಕ್ಷಿಸಲು ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಇಂದಿನ ಯುವ ಪೀಳಿಗೆ ಬೀದಿಗೆ ಇಳಿದು ಬರುತ್ತಿದೆ, ಮೊದಲು ಅವರಿಗೆ ದಾರಿ ಬಿಟ್ಟು ನೀವು ಪಕ್ಕಕ್ಕೆ ಸರಿಯಿರಿ” ಎಂದು ರಾಜಕಾರಣಿಗಳಿಗೆ ಕಡಕ್ ಎಚ್ಚರಿಕೆ ನೀಡಿದರು.

“ನಾವು ಯುವಕರು ನಮ್ಮ ಉದ್ಯೋಗಗಳಿಗಾಗಿ ಪರದಾಡಬೇಕಾ ಅಥವಾ ನಿಮ್ಮ ಕೊಳಕು ರಾಜಕೀಯದೊಂದಿಗೆ ಬದುಕು ಸಾಗಿಸಬೇಕಾ? ದೇಶದ ಯುವಜನತೆ ಈಗ ಜಾಗೃತರಾಗಿದ್ದಾರೆ, ನಿಮ್ಮ ಈ ಆಟ ಇನ್ನು ಮುಂದೆ ಸಾಗದು. ನಿವೃತ್ತಿ ವಯಸ್ಸಿಗೆ ಬಂದರೂ ಇನ್ನು ಕುರ್ಚಿಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿರುವ ನಾಯಕರು ಇನ್ನು ಸಾಕು. ಯುವಕರು ತಮ್ಮ ಕನಸುಗಳ ಸಾಕಾರಕ್ಕಾಗಿ ಹೋರಾಡುತ್ತಿದ್ದಾರೆ, ಅವರಿಗೆ ದಾರಿ ಮಾಡಿಕೊಡಿ” ಎಂದು ಅವರು ಕರೆ ನೀಡಿದರು.

ಇದೇ ವೇಳೆ ಶಿಕ್ಷಣ ಕ್ಷೇತ್ರಕ್ಕೆ ಪರಿಸರವಾದಿ ಸೋನಮ್ ವಾಂಗ್‌ಚುಕ್ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಶ್ಲಾಘಿಸಿದ ಪ್ರಕಾಶ್ ರಾಜ್, “ನಮ್ಮ ದೇಶದ ಶಿಕ್ಷಣ ಸಚಿವರಾಗಿ ಸೋನಮ್ ವಾಂಗ್‌ಚುಕ್ ಅವರಂತಹ ವ್ಯಕ್ತಿ ಇದ್ದಿದ್ದರೆ ಇಡೀ ದೇಶದ ಭವಿಷ್ಯವೇ ಬದಲಾಗುತ್ತಿತ್ತು” ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು