ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಪರಿಣಾಮ: ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರ, ಸೆನ್ಸೆಕ್ಸ್ 1,100 ಪಾಯಿಂಟ್ ಜಿಗಿತ

ಮುಂಬೈ : ಜಾಗತಿಕ ರಾಜಕೀಯ ಬೆಳವಣಿಗೆಯೊಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಉತ್ಸಾಹಕ್ಕೆ ಕಾರಣವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಘೋಷಣೆಯಾದ ಬೆನ್ನಲ್ಲೇ ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಪರಿಣಾಮವಾಗಿ ಬಿಎಸ್‌ಇ ಸೆನ್ಸೆಕ್ಸ್ 1,100ಕ್ಕೂ ಹೆಚ್ಚು ಪಾಯಿಂಟ್‌ಗಳ ಏರಿಕೆ ಕಂಡರೆ, ಎನ್‌ಎಸ್‌ಇ ನಿಫ್ಟಿ 350 ಪಾಯಿಂಟ್‌ಗಳಷ್ಟು ಜಿಗಿದು ಹಸಿರು ವಲಯದಲ್ಲಿ ವಹಿವಾಟು ಆರಂಭಿಸಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗಿನ ಸಂಘರ್ಷ ಅಂತ್ಯಗೊಳಿಸುವ ಒಪ್ಪಂದ ಪೂರ್ಣಗೊಂಡಿದ್ದು, ಜಾಗತಿಕ ತೈಲ ಸಾಗಣೆಯ ಪ್ರಮುಖ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮರುಮುಕ್ತಗೊಳಿಸಲು ಅನುಮತಿ ನೀಡಲಾಗಿದೆ ಎಂದು ಘೋಷಿಸಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಮನಾರ್ಹವಾಗಿ ಕುಸಿದಿವೆ.

ಭಾರತದಂತಹ ತೈಲ ಆಮದು ಅವಲಂಬಿತ ದೇಶಕ್ಕೆ ಕಚ್ಚಾ ತೈಲದ ಬೆಲೆ ಇಳಿಕೆ ದೊಡ್ಡ ಆರ್ಥಿಕ ಲಾಭ ತರುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ. ತೈಲ ಆಮದು ವೆಚ್ಚ ಕಡಿಮೆಯಾಗುವುದರಿಂದ ಚಾಲ್ತಿ ಖಾತೆ ಕೊರತೆ ಮತ್ತು ಹಣದುಬ್ಬರದ ಮೇಲಿನ ಒತ್ತಡ ತಗ್ಗುವ ನಿರೀಕ್ಷೆಯೂ ಮಾರುಕಟ್ಟೆಯ ಏರಿಕೆಗೆ ಬಲ ನೀಡಿದೆ.

ಇದೇ ವೇಳೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲೂ ಭಾರತೀಯ ರೂಪಾಯಿ ಬಲಿಷ್ಠ ಪ್ರದರ್ಶನ ನೀಡಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ 79 ಪೈಸೆ ಏರಿಕೆ ಕಂಡು 94.68 ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಕಳೆದ ಶುಕ್ರವಾರದ ಅಂತ್ಯಕ್ಕೆ ರೂಪಾಯಿ 95.11 ಮಟ್ಟದಲ್ಲಿತ್ತು.

ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕಿಂಗ್, ರಿಯಾಲ್ಟಿ, ವಾಹನೋದ್ಯಮ ಹಾಗೂ ಹಣಕಾಸು ಸೇವಾ ವಲಯದ ಷೇರುಗಳು ಹೆಚ್ಚು ಲಾಭ ದಾಖಲಿಸಿವೆ. ತೈಲ ಬೆಲೆ ಇಳಿಕೆಯಿಂದ ನೇರ ಲಾಭ ಪಡೆಯುವ ಸಾಧ್ಯತೆಯಿರುವ ವಾಹನ ಮತ್ತು ವಿಮಾನಯಾನ ಕ್ಷೇತ್ರದ ಷೇರುಗಳಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗಿದ್ದು, ಟಾಟಾ ಮೋಟಾರ್ಸ್ ಹಾಗೂ ಇಂಡಿಗೋ ಸಂಸ್ಥೆಯ ಷೇರುಗಳು ಉತ್ತಮ ಏರಿಕೆ ಕಂಡಿವೆ.

ಜಾಗತಿಕ ಉದ್ವಿಗ್ನತೆ ಕಡಿಮೆಯಾಗಿರುವುದು, ತೈಲ ಬೆಲೆಗಳಲ್ಲಿ ಸ್ಥಿರತೆ ಮೂಡಿರುವುದು ಮತ್ತು ಹಣದುಬ್ಬರ ನಿಯಂತ್ರಣದ ನಿರೀಕ್ಷೆಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲೂ ಸಕಾರಾತ್ಮಕ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು