ಪೋಕ್ಸೊ ಪ್ರಕರಣ: ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ರದ್ದತಿ ಆದೇಶ ಜೂನ್ 30 ಕ್ಕೆ ಕಾಯ್ದಿರಿಸಿದ ಕೋರ್ಟ್!

ದಾವಣಗೆರೆ: ಹರಿಹರದ ವೀರಶೈವ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೊ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಅಂತಿಮ ತೀರ್ಪನ್ನು ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯವು ಜೂನ್ 30 ಕ್ಕೆ ಕಾಯ್ದಿರಿಸಿದೆ.

ಈ ಪ್ರಮುಖ ಅರ್ಜಿಯ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯವು ಈ ಹಿಂದೆ ಜೂನ್ 18 ರಂದು (ಗುರುವಾರ) ತನ್ನ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ, ಇದೇ ಅವಧಿಯಲ್ಲಿ ಸಂತ್ರಸ್ತೆಯ ತಾಯಿಯು ಶ್ರೀಗಳ ಮುಂಗಡ ಜಾಮೀನು ರದ್ದುಪಡಿಸುವಂತೆ ಕೋರಿ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ಗ್ರಾಮೀಣ ಠಾಣೆ ಪೊಲೀಸರು ಎಫ್‌ಐಆರ್ (FIR) ದಾಖಲಾಗುವ ಮುನ್ನವೇ ಶ್ರೀಗಳಿಗೆ ದೊರೆತಿದ್ದ ಮುಂಗಡ ಜಾಮೀನನ್ನು ರದ್ದುಗೊಳಿಸುವಂತೆ ಕೆಳ ನ್ಯಾಯಾಲಯಕ್ಕೆ ಅಧಿಕೃತ ಅರ್ಜಿ ಸಲ್ಲಿಸಿದ್ದರು. ಈ ತಾಂತ್ರಿಕ ನಡಾವಳಿಯ ವಿರುದ್ಧ ಶ್ರೀಗಳ ಪರ ಹಿರಿಯ ವಕೀಲರಾದ ಎಸ್.ವಿ. ಪಾಟೀಲ್ ಅವರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಕೀಲ ಎಸ್.ವಿ. ಪಾಟೀಲ್, ಸಂತ್ರಸ್ತೆಯ ತಾಯಿಯು ಈಗಾಗಲೇ ಹೈಕೋರ್ಟ್‌ನಲ್ಲಿ ಇದೇ ವಿಷಯವಾಗಿ ಅರ್ಜಿ ಸಲ್ಲಿಸಿರುವುದು ವಿಚಾರಣಾ ನ್ಯಾಯಾಲಯದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಉನ್ನತ ನ್ಯಾಯಾಲಯದ ಮುಂದಿನ ನಡೆ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲು ಜಿಲ್ಲಾ ವಿಶೇಷ ನ್ಯಾಯಾಲಯವು ತನ್ನ ಅಂತಿಮ ಆದೇಶವನ್ನು ಜೂನ್ 30 ಕ್ಕೆ ಮುಂದೂಡಿ ಕಾಯ್ದಿರಿಸಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು