ಬಿಹಾರ: ಕಳ್ಳತನದ ಆರೋಪ ಹೊರಿಸಿ ದೇವಸ್ಥಾನದ ಜಾತ್ರೆಯಲ್ಲಿ ಇಬ್ಬರು ದಲಿತ ಯುವಕರನ್ನು ಹೊಡೆದು ಕೊಂದ ಉದ್ರಿಕ್ತ ಗುಂಪು!

ಪಟ್ನಾ/ನಲಂದಾ: ಬಿಹಾರದ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾದ ರಾಜ್‌ಗೀರ್‌ನಲ್ಲಿ ನಡೆಯುತ್ತಿರುವ ಮಲ್ಮಾಸ್ ಜಾತ್ರೆಯ ವೇಳೆ, ಕಳ್ಳತನದ ಶಂಕೆ ವ್ಯಕ್ತಪಡಿಸಿ ಇಬ್ಬರು ದಲಿತ ಯುವಕರನ್ನು ಉದ್ರಿಕ್ತ ಜನರ ಗುಂಪೊಂದು ಹೊಡೆದು ಕೊಂದಿರುವ ಭೀಕರ ಘಟನೆ ನಡೆದಿದೆ.

ಮೃತರನ್ನು ನಲಂದಾ ಜಿಲ್ಲೆಯ ಗಂಜ್‌ಪಾರ್ ಗ್ರಾಮದ ನಿವಾಸಿಗಳಾದ ಪಿಂಟು ಪಾಸ್ವಾನ್ (24) ಮತ್ತು ಶ್ರವಣ್ ಪಾಸ್ವಾನ್ (18) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಭಾನುವಾರ ರಾತ್ರಿ ರಾಜ್‌ಗೀರ್‌ನ ಪ್ರಸಿದ್ಧ ಜುಂಕಿಯಾ ಬಾಬಾ ದೇವಸ್ಥಾನದ ಜಾತ್ರೆಗೆ ತೆರಳಿದ್ದರು.

ವರದಿಗಳ ಪ್ರಕಾರ, ಸೋಮವಾರ ಮುಂಜಾನೆ ಸುಮಾರು 3:30ರ ವೇಳೆಗೆ ನಾಲ್ಕು ಜನ ಯುವಕರು ದೇವಸ್ಥಾನದ ಆವರಣದ ಪಂಗತ್ ಪ್ರದೇಶಕ್ಕೆ ಪ್ರವೇಶಿಸಿದ್ದರು. ಈ ವೇಳೆ ಅವರು ಕಳ್ಳತನ ಮಾಡಲು ಯತ್ನಿಸುತ್ತಿದ್ದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಆರೋಪಿಸಿದೆ. ಈ ಕುರಿತು ಮಾಹಿತಿ ನೀಡಿರುವ ಅಖಿಲ ಭಾರತ ಮಹಾಮಂಡಲೇಶ್ವರ ಮಹಂತ್ ಅಂತರ್ಯಾಮಿ ಶರಣ್, “ಕಳೆದ ಕೆಲವು ದಿನಗಳಿಂದ ದೇವಸ್ಥಾನದ ಆವರಣದಲ್ಲಿ ಸರಣಿ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದವು. ಮಲ್ಮಾಸ್ ಜಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಜಮಾಯಿಸಿದ್ದು, ಕಳ್ಳತನದ ಘಟನೆಗಳಿಂದಾಗಿ ಭಕ್ತರು ಈಗಾಗಲೇ ತೀವ್ರ ಆಕ್ರೋಶಗೊಂಡಿದ್ದರು,” ಎಂದಿದ್ದಾರೆ.

ಮುಂಜಾನೆ ವೇಳೆ ಯುವಕರ ಸಂಶಯಾಸ್ಪದ ಚಲನವಲನವನ್ನು ಗಮನಿಸಿದ ಭಕ್ತರು ಅವರನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಇಬ್ಬರು ಯುವಕರು ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಓಡುವ ರಭಸದಲ್ಲಿ ಕೆಳಗೆ ಬಿದ್ದ ಪಿಂಟು ಮತ್ತು ಶ್ರವಣ್ ಅವರನ್ನು ಉದ್ರಿಕ್ತರ ಗುಂಪು ಹಿಡಿದುಕೊಂಡಿದೆ. ತಕ್ಷಣವೇ ಇಡೀ ಜನಸಮೂಹವು ಕಾನೂನನ್ನು ಕೈಗೆತ್ತಿಕೊಂಡು ಯುವಕರಿಬ್ಬರ ಮೇಲೂ ದೊಣ್ಣೆ ಮತ್ತು ಕೋಲುಗಳಿಂದ ಅತ್ಯಂತ ಕ್ರೂರವಾಗಿ ಗುಂಪು ಹಲ್ಲೆ ನಡೆಸಿದೆ.

ಘಟನೆಯ ನಂತರ ದೇವಸ್ಥಾನದ ಭದ್ರತಾ ಸಿಬ್ಬಂದಿ ಉದ್ರಿಕ್ತ ಗುಂಪಿನಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕರನ್ನು ರಕ್ಷಿಸಿ ರಾಜ್‌ಗೀರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (PMCH) ರವಾನಿಸಲಾಯಿತು. ಆದರೆ ದೇಹದ ಆಂತರಿಕ ಭಾಗಗಳಿಗೆ ಭಾರಿ ಪೆಟ್ಟು ಬಿದ್ದಿದ್ದರಿಂದ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನಲಂದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಭರತ್ ಸೋನಿ, “ನಾವು ಈ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಇದು ಸ್ಪಷ್ಟವಾಗಿ ಜೋಡಿ ಕೊಲೆ (Double Murder) ಪ್ರಕರಣವಾಗಿದೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಘಟನೆಗೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸಲು ರಾಜ್‌ಗೀರ್ ಡಿಎಸ್‌ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಈಗಾಗಲೇ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮೃತ ಪಿಂಟು ತಾಯಿ ಸರೋಜಾ ದೇವಿ ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. “ನನ್ನ ಮಗ ದಿನಗೂಲಿ ಕಾರ್ಮಿಕನಾಗಿದ್ದ, ಆತನ ತಂದೆಯ ಮರಣದ ನಂತರ ಇಡೀ ಕುಟುಂಬಕ್ಕೆ ಆತನೇ ಏಕೈಕ ಆಧಾರವಾಗಿದ್ದ. ನನ್ನ ಮಗ ದೇವಸ್ಥಾನದ ಬಳಿ ಯಾಕೆ ಹೋಗಿದ್ದ ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಮಗ ಮತ್ತು ಆತನ ಸ್ನೇಹಿತನನ್ನು ಅತ್ಯಂತ ಕ್ರೂರವಾಗಿ ಹೊಡೆದು ಕೊಂದಿದ್ದಾರೆ. ಹಂತಕರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು,” ಎಂದು ಒತ್ತಾಯಿಸಿದ್ದಾರೆ. ಮೃತ ಪಿಂಟು ಐದು ಜನ ಸಹೋದರರು ಹಾಗೂ ಮೂವರು ಸಹೋದರಿಯರ ಪೈಕಿ ಹಿರಿಯವನಾಗಿದ್ದು, ಆತನ ಹಠಾತ್ ಸಾವು ಇಡೀ ದಲಿತ ಕುಟುಂಬವನ್ನು ಬೀದಿಗೆ ತಳ್ಳಿದೆ.

Related Articles

ಇತ್ತೀಚಿನ ಸುದ್ದಿಗಳು