4 ರಾಜ್ಯಗಳಲ್ಲಿ ವೋಟರ್ ಐಡಿ ಹೊಂದಿರುವ ಆರೋಪ: ನಟ ಪ್ರಕಾಶ್ ರೈ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ!

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು ನಾಲ್ಕು ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹೊಂದಿರುವ ಗಂಭೀರ ಆರೋಪದ ಮೇಲೆ ಬಹುಭಾಷಾ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ವಿರುದ್ಧ ಬೆಂಗಳೂರಿನ 48ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನುರಹಿತ ವಾರಂಟ್ (NBW) ಹೊರಡಿಸಿದೆ.

ಶೇಷಾದ್ರಿಪುರದ ನಿವಾಸಿ ಕೆ. ದಿಲೀಪ್ ಕುಮಾರ್ ಎಂಬುವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದರು. ಇದರ ಪ್ರಕಾರ, ನಟ ಪ್ರಕಾಶ್ ರೈ ಅವರು ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದ ಶಾಂತಿನಗರ, ತೆಲಂಗಾಣದ ಸೆರಿಲಿಂಗಪಲ್ಲಿ ಮತ್ತು ತಮಿಳುನಾಡಿನ ವೇಲಚೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (ಇಲ್ಲಿ ಒಟ್ಟು ಎರಡು) ಕಾನೂನುಬಾಹಿರವಾಗಿ ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂದು ಆಪಾದಿಸಲಾಗಿದೆ.

ಈ ಹಿಂದೆ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನಿಗೆ ಮೂರು ಬಾರಿ ಅಧಿಕೃತ ಸಮನ್ಸ್ ಜಾರಿಗೊಳಿಸಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ನ್ಯಾಯಾಲಯದ ಆದೇಶದ ಈ ಸರಣಿ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮ್ಯಾಜಿಸ್ಟ್ರೇಟ್ ಕೋರ್ಟ್, ಇದೀಗ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿದೆ.

ಇದೇ ವೇಳೆ, ನಟ ಪ್ರಕಾಶ್ ರೈ ಅವರು ಸದ್ಯ ಪತ್ತೆಯಾಗುತ್ತಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಜೂನ್ 18 ರಂದು ಬೆಂಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಪ್ರಕಾಶ್ ರೈ ಭಾಗವಹಿಸಿದ್ದಾಗ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರೇ ಅವರಿಗೆ ಅಧಿಕೃತ ಭದ್ರತೆ ನೀಡಿದ್ದರು. ಆದರೂ ಪೊಲೀಸರು ಅವರಿಗೆ ನ್ಯಾಯಾಲಯದ ನೋಟಿಸ್ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಎಲ್ಲಾ ರಾಜಕೀಯ ಮತ್ತು ಕಾನೂನಾತ್ಮಕ ಬೆಳವಣಿಗೆಗಳಿಂದಾಗಿ ನಟ ಪ್ರಕಾಶ್ ರೈ ಅವರ ಬಂಧನ ಸದ್ಯ ಅನಿವಾರ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು