ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿದುರಂತ: 15 ವಿದ್ಯಾರ್ಥಿಗಳ ಸಾವು, ಪ್ರಾಣ ಉಳಿಸಿಕೊಳ್ಳಲು ಮಹಡಿಯಿಂದ ಜಿಗಿದ ಮಕ್ಕಳು!

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಕೋಚಿಂಗ್ ಸೆಂಟರ್ ಮತ್ತು ಗೇಮಿಂಗ್ ಜೋನ್ ಹೊಂದಿದ್ದ ವಾಣಿಜ್ಯ ಕಟ್ಟಡವೊಂದರಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಅಗ್ನಿಪ್ರಮಾಧ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಸಜೀವ ದಹನವಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕೆಲವು ವಿದ್ಯಾರ್ಥಿಗಳು ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಜಿಗಿದಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಉಷಾ ಮೆಹ್ತಾ ಮಾರ್ಗದ ವಾಣಿಜ್ಯ ಪ್ರದೇಶದಲ್ಲಿರುವ ಕಟ್ಟಡದಲ್ಲಿ ಈ ದುರಂತ ನಡೆದಿದೆ. ಈ ಕಟ್ಟಡದ ನೆಲಮಹಡಿಯಲ್ಲಿ ಪೆಟ್ ಶಾಪ್ (ಸಾಕುಪ್ರಾಣಿಗಳ ಅಂಗಡಿ) ಹಾಗೂ ಮೇಲಿನ ಮಹಡಿಗಳಲ್ಲಿ ಕೋಚಿಂಗ್ ಸೆಂಟರ್ ಮತ್ತು ಗೇಮಿಂಗ್ ಜೋನ್ ಕಾರ್ಯಾಚರಿಸುತ್ತಿದ್ದವು. ಮಧ್ಯಾಹ್ನದ ವೇಳೆಗೆ ಕಟ್ಟಡದ ಮೊದಲ ಮಹಡಿಯಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ, ನೋಡನೋಡುತ್ತಿದ್ದಂತೆಯೇ ಮೇಲಿನ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್‌ಗೆ ವ್ಯಾಪಿಸಿತು. ಭಾರಿ ಪ್ರಮಾಣದ ಹೊಗೆ ಮತ್ತು ಜ್ವಾಲೆ ಇಡೀ ಕಟ್ಟಡವನ್ನು ಆವರಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡರು.

ಪ್ರಾಣ ಉಳಿಸಿಕೊಳ್ಳಲು ಕೆಳಗೆ ಜಿಗಿದ ವಿದ್ಯಾರ್ಥಿಗಳು: ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಕೆಲವು ವಿದ್ಯಾರ್ಥಿಗಳು ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಜಿಗಿಯುತ್ತಿರುವ ದೃಶ್ಯಾವಳಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸುಮಾರು ಏಳರಿಂದ ಎಂಟು ವಿದ್ಯಾರ್ಥಿಗಳು ಹೀಗೆ ಕೆಳಗೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬ ಯುವಕ ಒಡೆದ ಕಿಟಕಿಯ ಮೂಲಕ ನೇರವಾಗಿ ಕೆಳಗೆ ಬೀಳುವುದನ್ನು ಕಂಡ ಸ್ಥಳೀಯರು ತಕ್ಷಣ ಆತನನ್ನು ರಕ್ಷಿಸಿದರು. ಇನ್ನು ಕೆಲವರು ಕಟ್ಟಡದ ಪಕ್ಕದಲ್ಲಿದ್ದ ವಿದ್ಯುತ್ ತಂತಿಗಳನ್ನು ಹಿಡಿದು ಕೆಳಗೆ ಇಳಿಯಲು ಯತ್ನಿಸಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಗಾಯಗೊಂಡ ಎಲ್ಲರನ್ನೂ ಸ್ಥಳೀಯರು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಆದರೆ ಕೆಳಗೆ ಜಿಗಿಯಲು ಹೆದರಿದ ಬಹುತೇಕ ವಿದ್ಯಾರ್ಥಿಗಳು ಕಟ್ಟಡದ ಒಳಗಡೆಯೇ ಸಿಲುಕಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸಲು 14 ಅಗ್ನಿಶಾಮಕ ವಾಹನಗಳು ಹಾಗೂ ಒಂದು ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ಬಳಸಲಾಯಿತು. ಆದರೆ, ಘಟನೆ ಸಂಭವಿಸಿದ ಅರ್ಧ ಗಂಟೆಯ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರಿಂದಲೇ ಪ್ರಾಣಹಾನಿಯ ಪ್ರಮಾಣ ಹೆಚ್ಚಾಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ಕುರಿತು ಮಾತನಾಡಿರುವ ವೈದ್ಯಾಧಿಕಾರಿ ಅನಿಲ್ ಅಗರ್ವಾಲ್, ದುರಂತದಲ್ಲಿ 15 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 22 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಳಗೆ ಬಿದ್ದ ಇಬ್ಬರು ವಿದ್ಯಾರ್ಥಿಗಳ ಬೆನ್ನಿನ ಮೂಳೆಗೆ ಬಲವಾದ ಪೆಟ್ಟಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ವಿಷಾದಿಸಿರುವ ಅವರು, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ದುರಂತದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು