ಚಿಕ್ಕಬಳ್ಳಾಪುರ ಕೆಂಪೇಗೌಡ ಜಯಂತಿ ಗಲಾಟೆ: ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಬೆದರಿಕೆ; ಜೆಡಿಎಸ್ ಪದಾಧಿಕಾರಿ ಸೇರಿ 8 ಮಂದಿ ಬಂಧನ!

ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಯ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಗುರಿಯಾಗಿಸಿ ಚಪ್ಪಲಿ ಎಸೆದು ತೀವ್ರ ಗಲಾಟೆ ಸೃಷ್ಟಿಸಿದ್ದ ಘಟನೆಗೆ ಸಂಬಂಧಿಸಿದಂತೆ, ಜೆಡಿಎಸ್ ಜಿಲ್ಲಾ ಸೋಷಿಯಲ್ ಮೀಡಿಯಾ ಸಂಯೋಜಕ ಅಖಿಲ್ ರೆಡ್ಡಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಮರುದಿನವೂ ಚಿಕ್ಕಬಳ್ಳಾಪುರ ನಗರದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಈ ಗದ್ದಲ ಮತ್ತು ಹಲ್ಲೆ ಯತ್ನದ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಬಂಧಿತ ಆರೋಪಿಗಳಾದ ಅಖಿಲ್ ರೆಡ್ಡಿ, ಮೋಹನ್ ರಾಜ್, ಮಹೇಂದ್ರ ಮತ್ತು ಪ್ರಕಾಶ್ ಎಂಬುವವರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅತ್ಯಂತ ಅಸಭ್ಯ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಶಾಸಕರಿಗೆ ಜೀವಬೆದರಿಕೆ ಒಡ್ಡಿದ ಈ ಆರೋಪಿಗಳು, ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಗೂಂಡಾ ವರ್ತನೆಯಲ್ಲಿ ಭಾಗಿಯಾಗಿರುವ ಇನ್ನುಳಿದ ಹಲವು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು