ಜೆಡಿಎಸ್‌ನಲ್ಲಿ ಇರೋದೇ 18 ಶಾಸಕರು, ಅವರಿಗೆ 70-80 ಕ್ಷೇತ್ರ ಬೇಕಂತೆ: ಪ್ರೀತಂಗೌಡ ವ್ಯಂಗ್ಯ

ಜೆಡಿಎಸ್‌ನಲ್ಲಿ ಇರುವುದೇ ಕೇವಲ 18 ಶಾಸಕರಾಗಿದ್ದರೂ ಅವರು ಬರೋಬ್ಬರಿ 70 ರಿಂದ 80 ಕ್ಷೇತ್ರಗಳನ್ನು ಕೇಳುತ್ತಿದ್ದಾರೆ ಎಂದು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ. ಗೆದ್ದವರಿಗೇ ಮತ್ತೆ ಟಿಕೆಟ್ ನೀಡಬೇಕೆಂಬ ನಿಯಮವಿದ್ದರೆ ಜೆಡಿಎಸ್‌ನ 18 ಜನರಿಗೆ ಮಾತ್ರ ಬಿ-ಫಾರಂ ನೀಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿರುವ ಅವರು, ಹಿಂದೆ ಚನ್ನಪಟ್ಟಣದಲ್ಲಿ ಏನಾಯಿತು ಹಾಗೂ ಮುಂದಿನ ದಿನಗಳಲ್ಲಿ ಹಾಸನ ಕ್ಷೇತ್ರದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಪ್ರಸ್ತುತ ಶಾಸಕ ಸ್ವರೂಪ್ ಪ್ರಕಾಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರೀತಂ ಗೌಡ, ಸ್ವರೂಪ್ ಇನ್ನೂ ಬಿಸಿ ರಕ್ತದಲ್ಲಿ ಮಾತನಾಡುತ್ತಿದ್ದು, ಅವರು ಜನರ ಪರವಾಗಿ ಉತ್ತಮ ಕೆಲಸ ಮಾಡಿ ವಿಶ್ವಾಸ ಗಳಿಸಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ ಸ್ವರೂಪ್ ಅವರ ರಾಜಕೀಯ ಹಿನ್ನೆಲೆಯನ್ನು ಕೆದಕಿದ ಅವರು, ಪ್ರತಿದಿನ ಲಾಟರಿ ಹೊಡೆಯಲು ಸಾಧ್ಯವಿಲ್ಲ, ಕೇವಲ ತಂದೆಯವರ ರಾಜಕೀಯ ವರ್ಚಸ್ಸು ಮತ್ತು ಅನುಕಂಪದ ಅಲೆಯ ಕಾರಣದಿಂದ ಅವರು ಗೆದ್ದಿದ್ದಾರೆಯೇ ಹೊರತು ಪ್ರತಿ ಚುನಾವಣೆಯೂ ಒಂದೇ ತರ ಇರುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಮಾತನಾಡಿದ ಮಾಜಿ ಶಾಸಕರು, ಪ್ರಸ್ತುತ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಅಸ್ತಿತ್ವದಲ್ಲಿದ್ದು, ಹಾಲಿ ಶಾಸಕರು ಜನರ ನಿರೀಕ್ಷೆ ತಲುಪಲು ವಿಫಲರಾದರೆ ತಾವು ಅಭ್ಯರ್ಥಿಯಾಗಲು ಸಿದ್ಧ ಎಂದಿದ್ದಾರೆ. ಒಂದು ವೇಳೆ ಪಕ್ಷ ತಮ್ಮಿಬ್ಬರನ್ನು ಬಿಟ್ಟು ಬೇರೆ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.

ಪ್ರೀತಂ ಗೌಡ ಅವರ ಶಕ್ತಿ ಮತ್ತು ಸಾಮರ್ಥ್ಯ ಏನೆಂಬುದು ಹಾಸನದ ಬಿಜೆಪಿ ಕಾರ್ಯಕರ್ತರಿಗೆ ಚೆನ್ನಾಗಿ ತಿಳಿದಿದೆ ಎಂದು ಪ್ರತಿಪಾದಿಸಿದ ಅವರು, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ತಾವು ಸದಾ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಒಂದು ವೇಳೆ ಪಕ್ಷಕ್ಕೆ ಪ್ರೀತಂ ಗೌಡ ಬೇಡ ಎನಿಸಿದರೆ ತಾವು ರಾಜಕೀಯದಿಂದ ವಿಶ್ರಾಂತಿ ಪಡೆಯಲು ಕೂಡ ಹಿಂಜರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು