ಎಸ್‌ಐಆರ್‌ | ಸರ್ಕಾರ ಸರಿಯಾಗಿ ಬಿಎಲ್‌ಒಗಳನ್ನು ನಿಯೋಜಿಸುತ್ತಿಲ್ಲ: ಆರ್‌ ಅಶೋಕ ಆರೋಪ

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ನೇಮಕಾತಿಗೆ ತೀವ್ರ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅನೇಕ ಕಡೆಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡದೆ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯೇ ನಡೆಯದಂತೆ ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ಅವರು ದೂರಿದ್ದಾರೆ. ಕಾಂಗ್ರೆಸ್ ಸರ್ಕಾರವು ಬಿಎಲ್‌ಒಗಳನ್ನು ಸಮರ್ಪಕವಾಗಿ ನೇಮಿಸಿಲ್ಲ ಎಂದು ದೂರಿದ ಅವರು, ಅಗತ್ಯವಿರುವ 30 ಅಧಿಕಾರಿಗಳ ಜಾಗದಲ್ಲಿ ಕೇವಲ 10 ರಷ್ಟು ಅಧಿಕಾರಿಗಳು ಮಾತ್ರ ಕಾಣಿಸುತ್ತಿದ್ದಾರೆ ಎಂದಿದ್ದಾರೆ. ಇನ್ನು ಸರ್ಕಾರ ತಮಗೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ (ಟಿಎ/ಡಿಎ) ನೀಡಿಲ್ಲ ಹಾಗೂ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಿಲ್ಲ ಎಂದು ಸ್ವತಃ ಅಧಿಕಾರಿಗಳೇ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಯನಗರದ ಸುಮಾರು 20 ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳಲ್ಲದವರನ್ನು ಹಾಗೂ ಕಾಂಗ್ರೆಸ್ ಮುಖಂಡರನ್ನು ಬಿಎಲ್‌ಒಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಅಶೋಕ ಆರೋಪಿಸಿದ್ದಾರೆ. ಇದೇ ವೇಳೆ ಚಾಮರಾಜಪೇಟೆಯಲ್ಲಿ ಮನೆ ಮನೆಗೆ ತೆರಳುವಾಗ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಫೋಟೋಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಕಿಡಿಕಾರಿದ ಅವರು, ಯಾವುದೇ ಬಿಎಲ್‌ಒಗಳು ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಅಥವಾ ನಾಯಕರ ಫೋಟೋಗಳನ್ನು ಪ್ರದರ್ಶಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು