ಬಾಲ್ಯವಿವಾಹ ತಡೆದ ಅಂಗನವಾಡಿ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ; ಕೋಲಾರದಲ್ಲಿ ಬೆಚ್ಚಿಬೀಳಿಸಿದ ಘಟನೆ

ಕೋಲಾರ: ಬಾಲ್ಯವಿವಾಹ ತಡೆಯಲು ಮುಂದಾಗಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಜೆ. ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅವರು ಅಪ್ರಾಪ್ತ ಬಾಲಕಿಯ ವಿವಾಹ ನಡೆಯುತ್ತಿರುವ ಮಾಹಿತಿ ತಿಳಿದು ಅಧಿಕಾರಿಗಳಿಗೆ ಮಾಹಿತಿ ನೀಡಿ ಮದುವೆಯನ್ನು ತಡೆದಿದ್ದರು. ಅಲ್ಲದೆ, ಬಾಲಕಿಯನ್ನು ರಕ್ಷಿಸಿ ಕೆಜಿಎಫ್‌ನ ಮಸ್ಕಾಂ ಬಾಲಮಂದಿರಕ್ಕೆ ಸೇರಿಸಿದ್ದರು ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು ಪದ್ಮಾವತಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಪದ್ಮಾವತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.

ಬಾಲ್ಯವಿವಾಹದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಕಾರ್ಯನಿರ್ವಹಿಸುವ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬಂದಿವೆ.

Related Articles

ಇತ್ತೀಚಿನ ಸುದ್ದಿಗಳು