ಖಾಸಗಿ ಲೇಔಟ್ ರಸ್ತೆಗಳು ಇನ್ಮುಂದೆ ಸರ್ಕಾರಿ ಸ್ವತ್ತು: ಫುಟ್‌ಪಾತ್ ವ್ಯಾಪಾರಿಗಳ ಸ್ಥಳಾಂತರಕ್ಕೂ ರಾಜ್ಯ ಸಂಪುಟ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಲೇಔಟ್‌ಗಳ ರಸ್ತೆಗಳನ್ನು ಸರ್ಕಾರಿ ಸ್ವತ್ತಾಗಿ ಪರಿವರ್ತಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ. ಜೊತೆಗೆ, ಪಾದಚಾರಿಗಳ ಅನುಕೂಲಕ್ಕಾಗಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಸೂಕ್ತ ಪರ್ಯಾಯ ಸ್ಥಳಗಳಿಗೆ ಸ್ಥಳಾಂತರಿಸಲು ಕೂಡ ಸಂಪುಟ ಅನುಮೋದನೆ ನೀಡಿದೆ.

ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇನ್ನು ಮುಂದೆ ಭೂ ಸ್ಥಿತೀಕರಣ (ಲ್ಯಾಂಡ್ ರೆಗ್ಯುಲರೈಸೇಶನ್) ಪ್ರಕ್ರಿಯೆ ಜಾರಿಯಾಗಲಿದೆ.

ಹೊಸ ನಿಯಮದ ಪ್ರಕಾರ, ಯಾವುದೇ ಖಾಸಗಿ ಲೇಔಟ್‌ನಲ್ಲಿ ಡೆವಲಪರ್ ಕೇವಲ ಒಂದು ನಿವೇಶನವನ್ನಾದರೂ ಹಂಚಿಕೆ ಮಾಡಿದರೆ, ಆ ಲೇಔಟ್‌ನ ರಸ್ತೆಗಳು ಸ್ವಯಂಚಾಲಿತವಾಗಿ ಸರ್ಕಾರಿ ಸ್ವತ್ತಾಗಲಿವೆ. ಇನ್ನು ಮುಂದೆ ಖಾಸಗಿ ಲೇಔಟ್ ರಸ್ತೆಗಳು ಖಾಸಗಿಯವರ ಸ್ವಾಧೀನದಲ್ಲಿ ಉಳಿಯಲು ಅವಕಾಶ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ವೇಳೆ, ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಫುಟ್‌ಪಾತ್‌ಗಳಲ್ಲಿ ವ್ಯಾಪಾರಕ್ಕೆ ಅವಕಾಶ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಫುಟ್‌ಪಾತ್‌ಗಳಲ್ಲಿ ವ್ಯಾಪಾರ ನಡೆಸುತ್ತಿರುವವರನ್ನು ರಸ್ತೆ ಬದಿಯಲ್ಲೇ ಗುರುತಿಸಲಾದ ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು.

ಈ ಕುರಿತು ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಬೀದಿ ಬದಿ ವ್ಯಾಪಾರಿಗಳಿಗಾಗಿ ಈಗಾಗಲೇ ಸುಮಾರು 35 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ವೆಂಡಿಂಗ್ ವಲಯಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಅಲ್ಲದೆ, ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಬ್ಸಿಡಿಯನ್ನೂ ನೀಡಲಾಗುವುದು ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು