ರಾಮ ಮಂದಿರ ಹುಂಡಿ ಕಾಸು ಹಗರಣ: ಪ್ರಿಯಾಂಕಾ ಗಾಂಧಿ, ಕೇಜ್ರಿವಾಲ್ ಮುಂತಾದ ವಿಪಕ್ಷ ನಾಯಕರ ವಿಚಾರಣೆಗೆ ವಿಎಚ್‌ಪಿ ಆಗ್ರಹ

ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಆಮ್ ಆದ್ಮಿ ಪಕ್ಷದ (ಆಪ್) ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (VHP) ವಿಶೇಷ ತನಿಖಾ ತಂಡವನ್ನು (SIT) ಆಗ್ರಹಿಸಿದೆ. ಈ ನಾಯಕರು ದೇಣಿಗೆ ಲೂಟಿ ಬಗ್ಗೆ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳ ಆಧಾರದ ಮೇಲೆ ಇವರನ್ನು ತನಿಖೆಗೆ ಒಳಪಡಿಸಬೇಕು ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಅವರು ಅಯೋಧ್ಯೆ ಡಿಎಸ್‌ಪಿ ಹಾಗೂ ತನಿಖಾಧಿಕಾರಿ ಅಶುತೋಷ್ ತಿವಾರಿ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸಂಸದ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಅವರುಗಳು ದೇಣಿಗೆ ಕಳ್ಳತನದ ಬಗ್ಗೆ ನಿರ್ದಿಷ್ಟ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಹಗರಣಕ್ಕೆ ಸಂಬಂಧಿಸಿದಂತೆ ಇವರ ಬಳಿ ಪ್ರಮುಖ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳು ಇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳ ಆಧಾರ, ಮಾಹಿತಿಯ ಮೂಲ ಮತ್ತು ದಾಖಲೆಗಳನ್ನು ಪಡೆದುಕೊಳ್ಳಲು ತನಿಖಾ ತಂಡವು ಇವರಿಗೆ ಸಮನ್ಸ್ ಜಾರಿ ಮಾಡುವುದು ಸೂಕ್ತ ಎಂದು ವಿಎಚ್‌ಪಿ ಪತ್ರದಲ್ಲಿ ತಿಳಿಸಿದೆ. ಒಂದು ವೇಳೆ ಇವರ ಆರೋಪಗಳು ಸುಳ್ಳು ಅಥವಾ ಆಧಾರರಹಿತ ಎಂದು ಸಾಬೀತಾದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದೂ ಪತ್ರದಲ್ಲಿ ಒತ್ತಾಯಿಸಲಾಗಿದೆ.

ರಾಮ ಮಂದಿರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ದೇಣಿಗೆಯನ್ನು ಪ್ರಭಾವಿಗಳ ಬೆಂಬಲವಿಲ್ಲದೆ ಕೇವಲ ಕೆಳಹಂತದ ನೌಕರರು ಲೂಟಿ ಮಾಡಲು ಸಾಧ್ಯವೇ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದರು. ಇತ್ತ ಅರವಿಂದ್ ಕೇಜ್ರಿವಾಲ್ ಅವರು ಸುಮಾರು 200 ಕೋಟಿ ರೂ. ನಗದು, ಶ್ರೀರಾಮನ ಹಾರ, ಚರಣ ಪಾದುಕೆಗಳು ಮತ್ತು ವಜ್ರಗಳನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಇದು 20,000 ಕೋಟಿ ರೂ. ಮೊತ್ತದ ಹಗರಣ ಎಂದರೆ, ಸಂಜಯ್ ಸಿಂಗ್ 200 ಕೋಟಿಗೂ ಅಧಿಕ ಲೂಟಿಯಾಗಿದ್ದು ಇದರಲ್ಲಿ 50ಕ್ಕೂ ಹೆಚ್ಚು ನೌಕರರು ಭಾಗಿಯಾಗಿದ್ದಾರೆ ಎಂದು ದೂರಿದ್ದರು. ಈ ಎಲ್ಲಾ ಹೇಳಿಕೆಗಳನ್ನು ವಿಎಚ್‌ಪಿ ತನ್ನ ಪತ್ರದಲ್ಲಿ ಪ್ರಸ್ತಾಪಿಸಿದೆ.

ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಣಿಗೆ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಎಂಟು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳ ನಂಟು ಸಾಬೀತಾಗಿದ್ದರೂ, ಲೂಟಿಯಾದ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಪತ್ತೆ ಹಚ್ಚಲು ಎಸ್‌ಐಟಿ ತನಿಖೆಯನ್ನು ತೀವ್ರಗೊಳಿಸಿದೆ. ಆರೋಪಿಗಳಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ, ಈ ಹಣದಿಂದ ಖರೀದಿಸಲಾದ ಚರ ಮತ್ತು ಸ್ಥಿರ ಆಸ್ತಿಗಳ ಹುಡುಕಾಟ ನಡೆಸಲಾಗುತ್ತಿದೆ. ಇದೇ ವೇಳೆ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ರಾಮ ಮಂದಿರ ಟ್ರಸ್ಟ್ ಅನ್ನು ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಗೆ ತರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ವಿಎಚ್‌ಪಿ ಬೇಡಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, “ಟ್ರಸ್ಟ್‌ನ ಉಸ್ತುವಾರಿಯಲ್ಲೇ ಕಳ್ಳತನ ನಡೆದಿರುವಾಗ ಸಂಘ ಪರಿವಾರದವರು ವಿರೋಧ ಪಕ್ಷದ ನಾಯಕರನ್ನು ಸಾಕ್ಷಿ ಕೇಳುತ್ತಿರುವುದು ಹಾಸ್ಯಾಸ್ಪದ” ಎಂದು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, ದೇಣಿಗೆ ಕಳ್ಳತನದ ಬಗ್ಗೆ ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದ ವಿಎಚ್‌ಪಿ ಮತ್ತು ಬಿಜೆಪಿ ನಾಯಕರನ್ನೂ ಸಹ ಎಸ್‌ಐಟಿ ಇದೇ ರೀತಿ ವಿಚಾರಣೆಗೆ ಕರೆಯಲಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ವಿರೋಧ ಪಕ್ಷಗಳು ಮತ್ತು ಹಿಂದುತ್ವ ಸಂಘಟನೆಗಳ ನಡುವಿನ ಈ ಸಂಘರ್ಷ ಅಯೋಧ್ಯೆ ದೇಣಿಗೆ ವಿವಾದವನ್ನು ಮತ್ತಷ್ಟು ಕಾವೇರಿಸುವಂತೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು