ತಾಜ್ ಮಹಲ್ ವಿವಾದ ಮತ್ತೆ ಹೈಕೋರ್ಟ್ ಅಂಗಳಕ್ಕೆ; ಸಾಕ್ಷಿ ಮತ್ತು ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ, ಎಎಸ್‌ಐಗೆ ನೋಟಿಸ್

ಜಗತ್ತಿನ ಪ್ರಸಿದ್ಧ ಸ್ಮಾರಕವಾದ ತಾಜ್ ಮಹಲ್‌ ಕುರಿತು ಹಲವು ವರ್ಷಗಳಿಂದ ಕೇಳಿಬರುತ್ತಿರುವ ‘ತೇಜೋ ಮಹಾಲಯ’ ವಿವಾದ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದೆ. ತಾಜ್ ಮಹಲ್ ಮೂಲತಃ ಶಿವನಿಗೆ ಸಮರ್ಪಿತವಾದ ‘ತೇಜೋ ಮಹಾಲಯ’ ಎಂಬ ಹಿಂದೂ ದೇವಾಲಯವಾಗಿತ್ತು ಎಂದು ವಾದಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಕೇಂದ್ರ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಈ ಆದೇಶ ನೀಡಿದೆ. ಆಗ್ರಾ ನ್ಯಾಯಾಲಯದಲ್ಲಿ ತಾಜ್ ಮಹಲ್‌ ಸರ್ವೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದ ಹಿನ್ನೆಲೆಯಲ್ಲಿ, ಆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಅರ್ಜಿದಾರರ ಪರ ವಕೀಲ ಹರಿ ಶಂಕರ್ ಜೈನ್ ವಾದ ಮಂಡಿಸಿದ್ದು, ತಾಜ್ ಮಹಲ್ ವಾಸ್ತವವಾಗಿ ‘ತೇಜೋ ಮಹಾಲಯ’ ಎಂಬ ಪ್ರಾಚೀನ ಶಿವಾಲಯವಾಗಿದ್ದು, ‘ಲಾರ್ಡ್ ಶ್ರೀ ಅಗ್ರೇಶ್ವರ ಮಹಾದೇವ ನಾಗ್ನಾಥೇಶ್ವರ ವಿರಾಜಮಾನ್’ ಪರವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಹಿಂದೂಗಳಿಗೆ ಸಂವಿಧಾನದ ಅನುಚ್ಛೇದ 25ರ ಅಡಿಯಲ್ಲಿ ಪೂಜೆ ಮತ್ತು ದರ್ಶನದ ಹಕ್ಕು ಇರುವುದರಿಂದ, ತಾಜ್ ಮಹಲ್ ಅನ್ನು ಹಿಂದೂ ದೇವಾಲಯವೆಂದು ಘೋಷಿಸಿ ಪೂಜೆಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಅರ್ಜಿಯಲ್ಲಿ, ಕ್ರಿ.ಶ. 1155–56ರ ಅವಧಿಯಲ್ಲಿ ರಾಜ ಪರಮಾರ್ದಿ ದೇವ ಅವರು ಈ ದೇವಾಲಯವನ್ನು ನಿರ್ಮಿಸಿದ್ದು, ಬಳಿಕ ರಾಜ ಮಾನ್ ಸಿಂಗ್ ಹಾಗೂ ರಾಜ ಜೈ ಸಿಂಗ್ ಅವರ ವಶದಲ್ಲಿತ್ತು. ನಂತರ ಮೊಘಲ್ ಚಕ್ರವರ್ತಿ ಶಾಹಜಹಾನ್ ಅದನ್ನು ತನ್ನ ಪತ್ನಿ ಮುಮ್ತಾಜ್ ಮಹಲ್ ಸ್ಮಾರಕವಾಗಿ ಪರಿವರ್ತಿಸಿದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಕಟ್ಟಡದ ಮೇಲೆ ಕಾಣುವ ಕಮಲದ ವಿನ್ಯಾಸ, ಕಲಶ ಸೇರಿದಂತೆ ಹಲವು ಶಿಲ್ಪಕಲಾ ಅಂಶಗಳು ಹಿಂದೂ ದೇವಾಲಯದ ಲಕ್ಷಣಗಳಾಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ತಾಜ್ ಮಹಲ್ ಸಂಕೀರ್ಣದ ಕೆಲವು ಭಾಗಗಳನ್ನು ಸಾರ್ವಜನಿಕರಿಗೆ ಮುಚ್ಚಿಡಲಾಗಿದೆ ಹಾಗೂ ಎಎಸ್‌ಐ ಮುಸ್ಲಿಮರಿಗೆ ಶುಕ್ರವಾರ ನಮಾಜ್‌ಗೆ ಅವಕಾಶ ನೀಡುತ್ತಿದ್ದರೂ, ಹಿಂದೂಗಳಿಗೆ ಪೂಜೆಗೆ ಅವಕಾಶ ನಿರಾಕರಿಸುತ್ತಿದೆ ಎಂಬ ಆರೋಪವನ್ನೂ ಅರ್ಜಿದಾರರು ಮಾಡಿದ್ದಾರೆ.

ಇದಕ್ಕೂ ಮೊದಲು, 2019ರಲ್ಲಿ ತಾಜ್ ಮಹಲ್‌ನ ಸರ್ವೆಗಾಗಿ ಅಡ್ವೊಕೇಟ್ ಕಮಿಷನರ್ ನೇಮಕ ಮಾಡುವಂತೆ ಆಗ್ರಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ತಿರಸ್ಕರಿಸಿದ್ದರು. ಬಳಿಕ ಜಿಲ್ಲಾ ನ್ಯಾಯಾಲಯವೂ ಆ ತೀರ್ಪನ್ನು ಎತ್ತಿಹಿಡಿದಿತ್ತು. ಇದೀಗ ಆ ಎರಡೂ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಪ್ರಕರಣದಲ್ಲಿ ಉಲ್ಲೇಖಿಸಲಾದ ‘ತೇಜೋ ಮಹಾಲಯ’ ಸಂಬಂಧಿತ ವಾದಗಳು ಅರ್ಜಿದಾರರ ಆರೋಪಗಳಾಗಿದ್ದು, ಅವು ನ್ಯಾಯಾಲಯದಿಂದ ಅಥವಾ ಭಾರತೀಯ ಪುರಾತತ್ವ ಇಲಾಖೆಯಿಂದ ದೃಢೀಕರಿಸಲ್ಪಟ್ಟ ಐತಿಹಾಸಿಕ ಸತ್ಯಗಳಲ್ಲ. ಪ್ರಕರಣದ ಅಂತಿಮ ತೀರ್ಪು ಇನ್ನೂ ಹೊರಬರಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು