ಅಂಬುಲೆನ್ಸ್ ವಿಳಂಬ: ಆಟೋದಲ್ಲೇ ಹೆರಿಗೆಯಾಗಿ ಹುಟ್ಟಿದ ಕೆಲವೇ ಕ್ಷಣಗಳಲ್ಲಿ ನಾಲ್ಕು ಶಿಶುಗಳ ಸಾವು

ಭೋಪಾಲ್: ಸಮಯಕ್ಕೆ ಸರಿಯಾಗಿ 108 ಅಂಬುಲೆನ್ಸ್ ಬಾರದ ಕಾರಣ ಗರ್ಭಿಣಿಯೊಬ್ಬರು ಆಟೋದಲ್ಲೇ ನಾಲ್ಕು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ನಾಲ್ಕೂ ಶಿಶುಗಳು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ನೈನಗಾವಾ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಏಳು ತಿಂಗಳ ಗರ್ಭಿಣಿಯಾಗಿದ್ದ ರಜಿನಿ ಸಿಂಗಾರಂ (28) ಅವರಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕುಟುಂಬಸ್ಥರು ತಕ್ಷಣವೇ 108 ಅಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಕಾದರೂ ಅಂಬುಲೆನ್ಸ್ ಬಾರದ ಕಾರಣ, ಅನಿವಾರ್ಯವಾಗಿ ಮಹಿಳೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ.

ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಹೆರಿಗೆ ನೋವು ತೀವ್ರಗೊಂಡು, ಮಹಿಳೆ ಆಟೋದಲ್ಲೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ನಾಲ್ಕೂ ಶಿಶುಗಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣ ಹಾಗೂ ಸರ್ಕಾರದ ಆರೋಗ್ಯ ಸೇವೆಯ ನಿರ್ಲಕ್ಷ್ಯದಿಂದಾಗಿಯೇ ತನ್ನ ಪತ್ನಿ ನಾಲ್ಕು ಮಕ್ಕಳನ್ನು ಕಳೆದುಕೊಳ್ಳುವಂತಾಯಿತು ಎಂದು ಸಂತ್ರಸ್ತ ಮಹಿಳೆಯ ಪತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು