ಅಯೋಧ್ಯೆ ರಾಮ ಮಂದಿರ: ನಕಲಿ ರಸೀದಿ ನೀಡಿ ಭಕ್ತರಿಗೆ ವಂಚನೆ; ದೇಣಿಗೆ ಹಗರಣದಲ್ಲಿ ಸರಣಿ ಆಘಾತಕಾರಿ ಸತ್ಯ ಬಯಲು

ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರು ಸಮರ್ಪಿಸಿದ ಕಾಣಿಕೆಗಳ ಕಳ್ಳತನ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಒಂದರ ಬೆನ್ನಿಗೊಂದರಂತೆ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಹಣ ಲೂಟಿ ಮಾಡಿದ್ದಷ್ಟೇ ಅಲ್ಲದೆ, ಭಕ್ತರಿಂದ ದೇಣಿಗೆ ವಸೂಲಿ ಮಾಡಲು ನಕಲಿ ರಸೀದಿ ಪುಸ್ತಕಗಳನ್ನು ಸೃಷ್ಟಿಸಿ ದೊಡ್ಡ ಮಟ್ಟದ ವಂಚನೆ ಎಸಗಿರುವುದು ಪತ್ತೆಯಾಗಿದೆ.

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಬಂಧಿತ ಆರೋಪಿಗಳಿಂದ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಹೆಸರಿನಲ್ಲಿದ್ದ ನಕಲಿ ರಸೀದಿ ಪುಸ್ತಕವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಧಿಕೃತ ದೇಣಿಗೆಯ ಹೆಸರಿನಲ್ಲಿ ಭಕ್ತರನ್ನು ನಂಬಿಸಿ, ಈ ನಕಲಿ ರಸೀದಿಗಳ ಮೂಲಕ ಭಾರಿ ಪ್ರಮಾಣದ ಹಣ ವಸೂಲಿ ಮಾಡಿರುವುದಾಗಿ ಆರೋಪಿಗಳು ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ.

ಯಾರಾದರೂ ಭಕ್ತರು ದೇಣಿಗೆ ನೀಡಲು ಮುಂದೆ ಬಂದಾಗ ಆರೋಪಿಗಳು ಈ ನಕಲಿ ರಸೀದಿಗಳನ್ನು ನೀಡುತ್ತಿದ್ದರು. ರಸೀದಿಗಳು ಅಸಲಿಯಂತೆ ಕಾಣುತ್ತಿದ್ದರಿಂದ ಭಕ್ತರು ಸಹ ಇವುಗಳನ್ನು ಟ್ರಸ್ಟ್‌ನ ಅಧಿಕೃತ ರಸೀದಿಗಳೇ ಎಂದು ನಂಬಿ ಹಣ ನೀಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ವಶಪಡಿಸಿಕೊಳ್ಳಲಾದ ರಸೀದಿ ಪುಸ್ತಕಗಳು ಟ್ರಸ್ಟ್‌ನ ಹಳೆಯ ಪ್ರತಿಗಳ ಮಾದರಿಯಲ್ಲೇ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಜೈಲಿನಲ್ಲಿದ್ದ ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಎಂಬ ಮೂವರು ಆರೋಪಿಗಳನ್ನು ಅಯೋಧ್ಯೆ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯವಾಗಿ ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾ ಇತ್ತೀಚೆಗೆ ಖರೀದಿಸಿರುವ ಮನೆ ಮತ್ತು ವಾಹನದ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಭಕ್ತರಿಂದ ಕದ್ದ ಹಣದಿಂದಲೇ ಇವುಗಳನ್ನು ಖರೀದಿಸಲಾಗಿದೆಯೇ ಮತ್ತು ಬೇರೆ ಎಲ್ಲೆಲ್ಲಿ ಆಸ್ತಿ ಹೂಡಿಕೆ ಮಾಡಲಾಗಿದೆ ಎಂಬ ಕೋನದಲ್ಲಿ ತನಿಖೆ ಮುಂದುವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು