ಕೊಚ್ಚಿಹೋದ 3 ಸಾವಿರ ಎಲ್‌ಪಿಜಿ ಸಿಲಿಂಡರ್: ಎಚ್‌ಪಿಸಿಎಲ್ ಬಾಟ್ಲಿಂಗ್ ಪ್ಲಾಂಟ್‌ಗೆ ನುಗ್ಗಿದ ಮಹಾಪೂರ

ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಎಲ್‌ಪಿಜಿ ಗ್ಯಾಸ್ ಪ್ಲಾಂಟ್ ಒಂದು ಸಂಪೂರ್ಣ ಜಲಾವೃತಗೊಂಡಿದ್ದು, ಪ್ಲಾಂಟ್‌ನಲ್ಲಿದ್ದ ಸುಮಾರು ಮೂರು ಸಾವಿರ ಸಿಲಿಂಡರ್‌ಗಳು ಪಾತಾಳಗಂಗಾ ನದಿಯಲ್ಲಿ ಕೊಚ್ಚಿಹೋಗಿವೆ. ಸಾವಿರಾರು ಸಿಲಿಂಡರ್‌ಗಳು ನದಿಯ ಪ್ರವಾಹದಲ್ಲಿ ತೇಲುತ್ತಾ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ರಾಯಗಢದಲ್ಲಿರುವ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಗೆ ಸೇರಿದ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಯೂನಿಟ್‌ನ ಕಾಂಪೌಂಡ್ ಗೋಡೆಯು ಭಾರಿ ಮಳೆಗೆ ಕುಸಿದು ಬಿದ್ದಿದೆ. ಇದರ ಬೆನ್ನಲ್ಲೇ ಭಾರಿ ಪ್ರಮಾಣದ ಪ್ರವಾಹದ ನೀರು ಘಟಕದ ಆವರಣದೊಳಗೆ ನುಗ್ಗಿದೆ. ಪರಿಣಾಮವಾಗಿ, ಅಲ್ಲಿ ಸಂಗ್ರಹಿಸಿಡಲಾಗಿದ್ದ ಸಾವಿರಾರು ಸಿಲಿಂಡರ್‌ಗಳು ಪಾತಾಳಗಂಗಾ ನದಿ ಮತ್ತು ಸಮುದ್ರದ ಉಪ್ಪುನೀರಿನ ಕಾಲುವೆಯಾದ ಖರ್ಪಡದಲ್ಲಿ ಕೊಚ್ಚಿಹೋಗಿವೆ.

ಕೊಚ್ಚಿಹೋಗಿರುವ ಸಿಲಿಂಡರ್‌ಗಳಲ್ಲಿ ಗ್ಯಾಸ್ ತುಂಬಿರುವ ಸಿಲಿಂಡರ್‌ಗಳು ಸಹ ಸೇರಿವೆ. ಸೇತುವೆಯೊಂದರ ಬಳಿ ಸಾವಿರಾರು ಸಿಲಿಂಡರ್‌ಗಳು ಪ್ರವಾಹದಲ್ಲಿ ತೇಲುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನದಿಯ ಪ್ರವಾಹದಲ್ಲಿ ತೇಲಿಬಂದ ಸಿಲಿಂಡರ್‌ಗಳು ಯಾರಿಗಾದರೂ ಸಿಕ್ಕರೆ ಅವುಗಳನ್ನು ತಕ್ಷಣವೇ ಪೊಲೀಸರು, ಸ್ಥಳೀಯ ಅಧಿಕಾರಿಗಳು ಅಥವಾ ಗ್ಯಾಸ್ ಕಂಪನಿಗೆ ಒಪ್ಪಿಸಬೇಕು ಎಂದು ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರವಾಹದಲ್ಲಿ ತೇಲಿಬಂದಿರುವ ಸಿಲಿಂಡರ್‌ಗಳು ಹಾನಿಗೊಳಗಾಗಿರುವ ಸಾಧ್ಯತೆ ಇರುವುದರಿಂದ, ಒಂದು ವೇಳೆ ಅವುಗಳಲ್ಲಿ ಗ್ಯಾಸ್ ತುಂಬಿದ್ದರೂ ಸಹ ಸಾರ್ವಜನಿಕರು ಅವುಗಳನ್ನು ಬಳಸಲು ಪ್ರಯತ್ನಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು