ವಿಯೆಟ್ನಾಂನಲ್ಲಿ ಭೀಕರ ಜಲದುರಂತ: ಭಾರತೀಯ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ ಉರುಳಿ 15 ಸಾವು; 21 ಮಂದಿಯ ರಕ್ಷಣೆ

ಹನೋಯ್/ಫು ಕ್ವಾಕ್ : ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ ದ್ವೀಪದ ಸಮೀಪ ಭಾರತೀಯ ಪ್ರವಾಸಿಗರನ್ನು ಹೊತ್ತಿದ್ದ ಸ್ಪೀಡ್‌ಬೋಟ್ ಉರುಳಿದ ಪರಿಣಾಮ ಕನಿಷ್ಠ 15 ಭಾರತೀಯ ಪ್ರವಾಸಿಗರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ. ಭಾರೀ ಗಾಳಿ ಮತ್ತು ಅಲೆಗಳ ನಡುವೆಯೇ ಈ ದುರ್ಘಟನೆ ಸಂಭವಿಸಿದ್ದು, 21 ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, ದೋಣಿಯಲ್ಲಿ 32 ಭಾರತೀಯ ಪ್ರವಾಸಿಗರು, ಮೂವರು ಸಿಬ್ಬಂದಿ ಹಾಗೂ ಒಬ್ಬ ಸಹಾಯಕ ಸೇರಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಹೋನ್ ಮೇ ರುಟ್ ನ್ಗೋಯ್ (Hon May Rut Ngoai) ದ್ವೀಪದಿಂದ ಆನ್ ಥೊಯ್ (An Thoi) ಬಂದರಿಗೆ ಹಿಂದಿರುಗುತ್ತಿದ್ದ ವೇಳೆ ದ್ವೀಪದಿಂದ ಸುಮಾರು 400 ಮೀಟರ್ ದೂರದಲ್ಲಿ ಸ್ಪೀಡ್‌ಬೋಟ್ ಏಕಾಏಕಿ ಉರುಳಿದೆ.

ಸ್ಥಳೀಯ ಮೀನುಗಾರರು ಮತ್ತು ಪ್ರವಾಸಿ ದೋಣಿಗಳ ಸಿಬ್ಬಂದಿ ಮೊದಲು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದು, ಬಳಿಕ ಕರಾವಳಿ ರಕ್ಷಣಾ ಪಡೆ, ನೌಕಾಪಡೆ, ಗಡಿ ಭದ್ರತಾ ಪಡೆ, ಪೊಲೀಸರು ಹಾಗೂ ವೈದ್ಯಕೀಯ ತಂಡಗಳು ಸ್ಥಳಕ್ಕೆ ಆಗಮಿಸಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಎಲ್ಲಾ 36 ಮಂದಿಯನ್ನು ಪತ್ತೆಹಚ್ಚಲಾಗಿದ್ದು, 15 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ತನಿಖೆಯಲ್ಲಿ ಭಾರೀ ಗಾಳಿ ಮತ್ತು ಪ್ರಬಲ ಅಲೆಗಳು ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ತಿಳಿಯಲು ವಿಯೆಟ್ನಾಂ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡಲು ಹೋ ಚಿ ಮಿನ್ ನಗರದಲ್ಲಿನ ಭಾರತೀಯ ಕಾನ್ಸುಲೇಟ್ ಹಾಗೂ ಹನೋಯ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ತಿಳಿಸಿದೆ. ಭಾರತೀಯ ಅಧಿಕಾರಿಗಳು ವಿಯೆಟ್ನಾಂ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಮತ್ತು ನೆರವು ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಈ ದುರ್ಘಟನೆ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವ ಅವರು, ಭಾರತೀಯ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಅಗತ್ಯವಿರುವ ಎಲ್ಲಾ ನೆರವು ಒದಗಿಸುತ್ತಿವೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು