ವೈಷ್ಣೋ ದೇವಿ ದೇವಸ್ಥಾನಕ್ಕೆ 550 ಕೋಟಿ ರೂ. ನಕಲಿ ಬೆಳ್ಳಿ ಕಾಣಿಕೆ: ತನಿಖಾಧಿಕಾರಿಗೆ ಜಮ್ಮು ಕೋರ್ಟ್ ಸಮನ್ಸ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕತ್ರಾ ಸಮೀಪದ ತ್ರಿಕೂಟ ಪರ್ವತದ ಮೇಲಿರುವ ಪ್ರಸಿದ್ಧ ಶ್ರೀ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ಭಕ್ತರು ನೀಡಿರುವ ಸುಮಾರು 550 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಕಾಣಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆಕ್ಷೇಪಣೆಗೆ ಸಂಬಂಧಿಸಿದಂತೆ ಜಮ್ಮು ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ತನಿಖಾಧಿಕಾರಿಯು ಜುಲೈ 29 ರಂದು ನಡೆಯಲಿರುವ ಮುಂದಿನ ವಿಚಾರಣೆಗೆ ಎಲ್ಲಾ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಬೇಕು ಎಂದು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (CJM) ಮುನಿಶ್ ಕುಮಾರ್ ಮನ್ಹಾಸ್ ಆದೇಶಿಸಿದ್ದಾರೆ.

ಹೈಕೋರ್ಟ್ ವಕೀಲ ದೀಪಕ್ ಶರ್ಮ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಪೊಲೀಸರ ವಿಳಂಬ ನೀತಿಗೆ ಈ ಕಠಿಣ ನಿರ್ದೇಶನ ನೀಡಿದೆ. ಅರ್ಜಿದಾರರ ಪ್ರಕಾರ, ಅವರು ಈ ವರ್ಷದ ಮೇ 9 ರಂದೇ ಕ್ರೈಂ ಬ್ರಾಂಚ್ ಐಜಿಪಿ ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಎಸ್‌ಎಸ್‌ಪಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದರು. ಆದರೆ, ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸದೆ ಕೇವಲ ಆಡಳಿತಾತ್ಮಕವಾಗಿ ದೂರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿ ಕೈತೊಳೆದುಕೊಂಡಿದ್ದಾರೆ. ಅಲ್ಲದೆ, ಪ್ರಕರಣದ ಪ್ರಮುಖ ಸಾಕ್ಷ್ಯಗಳಾದ ದೇವಸ್ಥಾನದ ದಾಸ್ತಾನು ರಿಜಿಸ್ಟರ್, ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಿದ್ಯುನ್ಮಾನ ದಾಖಲೆಗಳನ್ನು ಸಂರಕ್ಷಿಸಲು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದರು.

ದೇವಸ್ಥಾನದ ಮಂಡಳಿಯು ಭಕ್ತರಿಂದ ಸಂಗ್ರಹವಾಗಿದ್ದ ಸುಮಾರು 20 ಟನ್ ತೂಕದ (ಅಂದಾಜು 550 ಕೋಟಿ ರೂ. ಮೌಲ್ಯದ) ಬೆಳ್ಳಿ ಕಾಣಿಕೆಗಳನ್ನು ಕರಗಿಸಲು ಮತ್ತು ಸಂಸ್ಕರಣೆ ಮಾಡಲು ಸರ್ಕಾರಿ ಟಂಕಸಾಲೆಗೆ ಕಳುಹಿಸಿತ್ತು. ಆದರೆ ಅಲ್ಲಿ ಲೋಹದ ಗುಣಮಟ್ಟ ಪರೀಕ್ಷೆ ನಡೆಸಿದಾಗ ಕೇವಲ ಶೇಕಡಾ 5 ರಿಂದ 6 ರಷ್ಟು ಮಾತ್ರ ಅಸಲಿ ಬೆಳ್ಳಿ ಇರುವುದು ಪತ್ತೆಯಾಗಿದೆ. ಇನ್ನುಳಿದ ಶೇಕಡಾ 95 ರಷ್ಟು ಭಾಗವು ಕ್ಯಾಡ್ಮಿಯಂ, ಕಬ್ಬಿಣ ಮತ್ತು ಇತರ ಅಗ್ಗದ ಲೋಹಗಳಿಂದ ಕೂಡಿದ ನಕಲಿ ವಸ್ತುಗಳಾಗಿವೆ ಎಂಬ ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ, ಸ್ಥಳೀಯ ವ್ಯಾಪಾರಿಗಳು ಮತ್ತು ಚಿನ್ನದ ಆಭರಣಗಾರರೇ ಭಕ್ತರಿಗೆ ಇಂತಹ ನಕಲಿ ಮತ್ತು ಕಲ್ಬೆರಕೆಯ ಬೆಳ್ಳಿ ವಸ್ತುಗಳನ್ನು ಮಾರಿ ವಂಚಿಸಿದ್ದಾರೆಯೇ? ಅಥವಾ ಭಕ್ತರು ನೀಡಿದ ಅಸಲಿ ಬೆಳ್ಳಿ ಕಾಣಿಕೆಗಳನ್ನು ದೇವಸ್ಥಾನದ ಸಿಬ್ಬಂದಿ ಅಥವಾ ಸಂಬಂಧಪಟ್ಟ ವ್ಯವಸ್ಥಾಪಕರು ಸ್ವೀಕರಿಸಿದ ನಂತರ ಬೇರೆ ನಕಲಿ ವಸ್ತುಗಳೊಂದಿಗೆ ಬದಲಾಯಿಸಿ, ಅಕ್ರಮ ಎಸಗಿದ್ದಾರೆಯೇ? ಎಂಬಿತ್ಯಾದಿ ಗಂಭೀರ ಪ್ರಶ್ನೆಗಳ ಕುರಿತು ಪಾರದರ್ಶಕ ತನಿಖೆಯಾಗಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಸದ್ಯ ಕೋರ್ಟ್ ತನಿಖಾ ಸಂಸ್ಥೆಗೆ ಕಡಕ್ ಸೂಚನೆ ನೀಡಿರುವುದರಿಂದ ಈ ಜಾಗತಿಕ ಮಟ್ಟದ ವಂಚನೆ ಜಾಲದ ಅಸಲಿ ಮುಖ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು