ಹಾಸನದಲ್ಲಿ ಬಿಳಿಸುಳಿ ರೋಗದಿಂದ 40 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿ ಕೇಂದ್ರ ಸಚಿವರ ಬೇಟಿ ಮಾಡಿದ – ಶ್ರೇಯಸ್ ಪಟೇಲ್

ನವದೆಹಲಿ : ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಗೆ ವ್ಯಾಪಕವಾಗಿ ಹರಡಿರುವ ಡೌನಿ ಮಿಲ್ಡ್ಯೂ (ಬಿಳಿಸುಳಿ) ರೋಗದಿಂದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅತೀಶ್ ಚಂದ್ರ, ಐಎಎಸ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.

ಹಾಸನ ಜಿಲ್ಲೆಯ ರೈತರ ಸಮಸ್ಯೆಯನ್ನು ವಿವರಿಸಿದ ಸಂಸದರು, ಜಿಲ್ಲೆಯಲ್ಲಿ ಬಿಳಿಸುಳಿ ರೋಗ ತೀವ್ರವಾಗಿ ಹರಡುತ್ತಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿರುವುದರಿಂದ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಅಗತ್ಯ ಪರಿಹಾರ ಹಾಗೂ ತಾಂತ್ರಿಕ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಹಾಸನ ಜಿಲ್ಲೆಯಲ್ಲಿ ಸುಮಾರು 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಅದರಲ್ಲಿ ಈಗಾಗಲೇ 40 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಬಿಳಿಸುಳಿ ರೋಗಕ್ಕೆ ತುತ್ತಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬೆಳವಣಿಗೆಯಿಂದ ಸಾವಿರಾರು ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಪ್ರದೇಶಕ್ಕೆ ರೋಗ ಹರಡಿ ಭಾರೀ ಉತ್ಪಾದನಾ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಆರು ಪ್ರಮುಖ ಮನವಿಗಳು

ಸಂಸದ ಶ್ರೇಯಸ್ ಪಟೇಲ್ ಅವರು ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಭವಿಷ್ಯದಲ್ಲಿ ಬಿಳಿಸುಳಿ ರೋಗ ಹರಡುವುದನ್ನು ತಡೆಯಲು ದೀರ್ಘಕಾಲೀನ ಸಂಶೋಧನೆ, ಕಣ್ಗಾವಲು ಹಾಗೂ ತಡೆಗಟ್ಟುವ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.ಹಾಸನ ಜಿಲ್ಲೆಗೆ ಕೇಂದ್ರ ತಜ್ಞರ ತಂಡವನ್ನು ಕಳುಹಿಸಿ ಬೆಳೆ ಹಾನಿಯ ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸುವುದು.

ಐಸಿಎಆರ್ (ICAR) ಸೇರಿದಂತೆ ಸಂಬಂಧಿತ ಸಂಸ್ಥೆಗಳ ಮೂಲಕ ತಾಂತ್ರಿಕ ನೆರವು ಹಾಗೂ ರೋಗ ನಿಯಂತ್ರಣ ಕ್ರಮಗಳನ್ನು ಶಿಫಾರಸು ಮಾಡುವುದು.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಮಧ್ಯಂತರ ಪ್ರತಿಕೂಲ ಪರಿಸ್ಥಿತಿ (MSA) ಅಥವಾ ಸ್ಥಳೀಯ ವಿಕೋಪವಾಗಿ ಪರಿಗಣಿಸಿ ಪರಿಹಾರ ಘೋಷಿಸುವುದು.

ರಾಜ್ಯ ಸರ್ಕಾರ, ವಿಮಾ ಕಂಪನಿಗಳು ಹಾಗೂ ಸಂಬಂಧಿತ ಇಲಾಖೆಗಳ ಮೂಲಕ ಬೆಳೆ ನಷ್ಟದ ಮೌಲ್ಯಮಾಪನ ನಡೆಸಿ ವಿಮಾ ಪರಿಹಾರವನ್ನು ತ್ವರಿತವಾಗಿ ವಿತರಿಸುವುದು.

ಶಿಫಾರಸು ಮಾಡಿದ ಶಿಲೀಂಧ್ರನಾಶಕಗಳು, ರೋಗ ನಿರೋಧಕ ಬೀಜಗಳು ಹಾಗೂ ಕೃಷಿ ವಿಸ್ತರಣಾ ಸೇವೆಗಳ ಲಭ್ಯತೆಯನ್ನು ಖಚಿತಪಡಿಸುವುದು.

ಸಾಗುವಳಿಯಲ್ಲಿರುವ 71 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಈಗಾಗಲೇ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ, ರೈತರಿಗೆ ತಕ್ಷಣ ಪರಿಹಾರ ದೊರೆಯುವಂತೆ ವೈಯಕ್ತಿಕವಾಗಿ ಮಧ್ಯಪ್ರವೇಶಿಸುವಂತೆ ಸಂಸದರು ಕಾರ್ಯದರ್ಶಿ ಅತೀಶ್ ಚಂದ್ರ ಅವರಿಗೆ ಮನವಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು