ಚೆನ್ನಮ್ಮ ಅಂತ್ಯಕ್ರಿಯೆ ಹಾಸನದಲ್ಲಿ 5 ಹೆಲಿಪ್ಯಾಡ್‌ಗಳ ನಿರ್ಮಾಣ – ಅಗತ್ಯ ಸಿದ್ಧತೆ

ಹಾಸನ: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿರುವ ಹಿನ್ನೆಲೆಯಲ್ಲಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಹಾಸನ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಗಣ್ಯರ ಹೆಲಿಕಾಪ್ಟರ್‌ಗಳ ಸುರಕ್ಷಿತ ಲ್ಯಾಂಡಿಂಗ್ ಹಾಗೂ ಸುಗಮ ಸಂಚಾರಕ್ಕಾಗಿ ಹರದನಹಳ್ಳಿಯಲ್ಲಿ ಎರಡು ಮತ್ತು ಹೊಳೆನರಸೀಪುರದಲ್ಲಿ ಮೂರು ಸೇರಿದಂತೆ ಒಟ್ಟು ಐದು ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಅಂತ್ಯಕ್ರಿಯೆ ವೇಳೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಭದ್ರತೆ, ಸಂಚಾರ ನಿರ್ವಹಣೆ ಹಾಗೂ ಗಣ್ಯರ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದ್ದು, ಸ್ಥಳದಲ್ಲೇ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅಧಿಕೃತ ಆದೇಶ ಹೊರಡಿಸಿದ್ದು, ಅಂತ್ಯಕ್ರಿಯೆ ಕಾರ್ಯಕ್ರಮವು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಯುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು