ದೇಶ ತನ್ನ ಇತಿಹಾಸದಲ್ಲೇ ಇಂತಹ ಯುವಜನ ವಿರೋಧಿ ಸರ್ಕಾರವನ್ನು ಕಂಡಿಲ್ಲ: ರಾಹುಲ್‌ ಗಾಂಧಿ

ದೇಶದ ಇತಿಹಾಸದಲ್ಲೇ ಯುವಜನತೆಯನ್ನು ಅತ್ಯಂತ ಹೆಚ್ಚಾಗಿ ವಿರೋಧಿಸುವ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದು ಕಾಂಗ್ರೇಸ್ ಹಿರಿಯ ನಾಯಕ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪ್ರಧಾನಿ ಮೋದಿ ಪಟ್ಟು ಹಿಡಿಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಬೃಹತ್ ‘ಸಂಸತ್ ಚಲೋ’ ಪಾದಯಾತ್ರೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ರ‍್ಯಾಲಿಯ ಸಂದರ್ಭದಲ್ಲಿ ಸಿಜೆಪಿ ಕಾರ್ಯಕರ್ತರು ಹಾಗೂ ಯುವಜನತೆಯ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಲ್ಲದೆ ಅಶ್ರುವಾಯು ಪ್ರಯೋಗಿಸಿದ್ದರು.

ಈ ಘಟನೆಯಲ್ಲಿ ಹಲವರು ಗಾಯಗೊಂಡಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ದೇಶ ತನ್ನ ಇತಿಹಾಸದಲ್ಲೇ ಇಂತಹ ಯುವಜನ ವಿರೋಧಿ ಪ್ರಧಾನಿಯನ್ನು ಕಂಡಿಲ್ಲ. ಶಿಕ್ಷಣ ಸಚಿವರಾಗಿ ಸಂಪೂರ್ಣವಾಗಿ ವಿಫಲರಾಗಿರುವ ಧರ್ಮೇಂದ್ರ ಪ್ರಧಾನ್ ಅವರಿಂದ ಕನಿಷ್ಠ ರಾಜೀನಾಮೆ ಕೇಳುವ ಧೈರ್ಯವನ್ನೂ ಮೋದಿ ಮಾಡುತ್ತಿಲ್ಲ.

ಸುಮಾರು 152 ಪೇಪರ್ ಲೀಕೇಜ್‌ಗಳಿಂದಾಗಿ 7.5 ಕೋಟಿ ಯುವಕ-ಯುವತಿಯರು ಸಂತ್ರಸ್ತರಾಗಿದ್ದಾರೆ. ಆದರೆ, ಇದುವರೆಗೆ ಒಬ್ಬೇ ಒಬ್ಬ ತಪ್ಪಿತಸ್ಥನ ಮೇಲೆಯೂ ಕಠಿಣ ಕ್ರಮ ಕೈಗೊಂಡಿಲ್ಲ, ಶಿಕ್ಷೆಯನ್ನೂ ವಿಧಿಸಿಲ್ಲ. ಹಾಗಾದರೆ ಶಿಕ್ಷೆ ಅನುಭವಿಸುತ್ತಿರುವವರು ಯಾರು..? ಹಗಲಿರುಳು ಪರೀಕ್ಷೆಗಳಿಗಾಗಿ ಶ್ರಮಿಸುವ ದೇಶದ ಯುವಜನತೆ!

ಈ ಮಕ್ಕಳು ಅಕ್ರಮಗಳ ವಿರುದ್ಧ, ಶೈಕ್ಷಣಿಕ ವ್ಯವಸ್ಥೆಯ ವಿರುದ್ಧ ಪ್ರಶ್ನೆ ಎತ್ತಿದರೆ, ಅವರ ಮೇಲೆ ಭದ್ರತಾ ಪಡೆಗಳನ್ನು ಬಳಸಿ ದಾಳಿ ಮಾಡಿಸಲಾಗುತ್ತಿದೆ. ಪೇಪರ್ ಲೀಕ್ ಮಾಡಿದ ಅಪರಾಧಿಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದರೆ, ಧ್ವನಿ ಎತ್ತಿದ ವಿದ್ಯಾರ್ಥಿಗಳು ಲಾಠಿ ಏಟು ತಿನ್ನುತ್ತಿದ್ದಾರೆ. ಸರ್ಕಾರ ಯುವಜನರಿಗೆ ಅನ್ಯಾಯ ಮಾಡುತ್ತಿರುವುದು ಮಾತ್ರವಲ್ಲದೆ, ಅವರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.

ಇನ್ನೊಂದೆಡೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಸಹ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ಸಶಸ್ತ್ರ ಪಡೆಗಳನ್ನು ಪ್ರಯೋಗಿಸುವ ತನ್ನ ನೀತಿಯನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

“ಪ್ರಧಾನಿಯವರು ಪ್ರತಿಯೊಂದನ್ನೂ ತಾನೇ ಖುದ್ದಾಗಿ ನೋಡಿಕೊಳ್ಳುವುದಾಗಿ ಹೇಳಿಕೊಳ್ಳುತ್ತಾರೆ. ಹಾಗಿರುವಾಗ ದೇಶದಲ್ಲಿ ಇಷ್ಟೊಂದು ಸರಣಿ ಪೇಪರ್ ಲೀಕೇಜ್‌ಗಳು ಏಕೆ ನಡೆಯುತ್ತಿವೆ?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಮತ್ತು ಯುವಜನರ ಅಳಲನ್ನು ಪ್ರಧಾನಿ ಆಲಿಸಿ, ತಕ್ಷಣವೇ ಸ್ಪಂದಿಸಿ ಉತ್ತರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು