ರಷ್ಯಾ ಕ್ಷಿಪಣಿ ದಾಳಿಗೆ ಭಾರತದ ನಾಲ್ವರು ನಾವಿಕರ ಸಾವು: ರಷ್ಯಾ ರಾಯಭಾರಿಗೆ ಸಮನ್ಸ್ ಜಾರಿ

ದೆಹಲಿ: ಉಕ್ರೇನ್ ಮೇಲೆ ಸೋಮವಾರ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಒಡೆಸ್ಸಾ ಬಂದರಿನಲ್ಲಿ (Odesa Port) ನಂಗೂರಹಾಕಿದ್ದ ಹಡಗಿನ ಮೇಲೆ ರಷ್ಯಾ ಕ್ಷಿಪಣಿಗಳ ದಾಳಿ ನಡೆಸಿದೆ.

ಈ ಭೀಕರ ದಾಳಿಯಲ್ಲಿ ಒಟ್ಟು 10 ಜನರು ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ ನಾಲ್ವರು ಭಾರತೀಯರು ಸೇರಿದ್ದಾರೆ. ಈ ಘಟನೆಯ ಬೆನ್ನಲ್ಲೇ ಭಾರತ ಸರ್ಕಾರ ಇಂದಿಲ್ಲಿ ರಷ್ಯಾದ ರಾಯಭಾರಿಗೆ ಸಮನ್ಸ್ ಜಾರಿಗೊಳಿಸಿದೆ. ರಷ್ಯಾದ ರಾಯಭಾರಿ ವ್ಲಾಡಿಮಿರ್ ಲಡನೋವ್ ಅವರಿಗೆ ಸಮನ್ಸ್ ನೀಡಲಾಗಿದೆ.

ದಾಳಿಗೊಳಗಾದ ಭಾರತೀಯ ನಾವಿಕರಲ್ಲಿ ಮತ್ತೊಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನಾಲ್ವರು ಭಾರತೀಯರ ಸಾವಿಗೆ ಕಾರಣವಾದ ರಷ್ಯಾದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.

ರವಿವಾರ ‘ಎಮ್‌ವಿ ಗೋಲ್ಡನ್ ಲಿಯೋ’ (MV Golden Leo) ಎಂಬ ಸರಕು ಹಡಗು 17 ಜನರ ಸಿಬ್ಬಂದಿಯೊಂದಿಗೆ ಒಡೆಸ್ಸಾ ಬಂದರಿನಿಂದ ಹೊರಟಿತ್ತು. ಈ ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದ್ದರಿಂದ ಹತ್ತು ಜನರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ರಷ್ಯಾದ ಈ ಕೃತ್ಯವನ್ನು ಭಾರತ ಸರ್ಕಾರ ಕಠಿಣ ಶಬ್ದಗಳಲ್ಲಿ ಖಂಡಿಸಿದೆ.

ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು ಹಾಗೂ ಸಾಮಾನ್ಯ ನಾಗರಿಕರನ್ನು ಕೊಲ್ಲುವುದು ಸಮರ್ಥನೀಯವಲ್ಲ ಎಂದಿರುವ ಭಾರತ, ಮುಕ್ತ ಜಲಸಾರಿಗೆ ಮತ್ತು ವಾಣಿಜ್ಯಕ್ಕೆ ಅಡ್ಡಿಪಡಿಸಬಾರದೆಂದು ರಷ್ಯಾವನ್ನು ಆಗ್ರಹಿಸಿದೆ.

ಟರ್ಕಿಗೆ ಸೇರಿದ ‘ಗೋಲ್ಡನ್ ಲಿಯೋ’ ಎಂಬ ಸರಕು ಹಡಗಿನ ಮೇಲೆ ಈ ದಾಳಿ ನಡೆದಿದೆ. ರಷ್ಯಾ ಪಡೆಗಳು ಕೆಎಚ್-59 ಮತ್ತು ಕೆಎಚ್-69 ಮಾದರಿಯ ಕ್ರೂಸ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿರುವುದಾಗಿ ಉಕ್ರೇನ್ ಹೇಳಿದೆ. ಈ ಕ್ಷಿಪಣಿಗಳಲ್ಲಿ ಒಂದು ನೇರವಾಗಿ ಗೋಲ್ಡನ್ ಲಿಯೋ ಹಡಗಿಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು