ಸೋನಮ್ ವಾಂಗ್ಚುಕ್ ಅವರಿಗೆ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್

ದೆಹಲಿಯಲ್ಲಿ ನಿರಾಹಾರ ದೀಕ್ಷೆ ನಡೆಸುತ್ತಿದ್ದ ಪ್ರಸಿದ್ಧ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ನ್ಯಾಯಾಲಯದಲ್ಲಿ ದೊಡ್ಡ ಸಮಾಧಾನ ಸಿಕ್ಕಿದೆ. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

ಈ ಕುರಿತು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ಅವರು ದೆಹಲಿಯ ಜಂತರ್ ಮಂತರ್ ಬಳಿ ನಿರಾಹಾರ ದೀಕ್ಷೆ ಕುಳಿತಿದ್ದರು. ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು. ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅವರನ್ನು ಸ್ಥಳೀಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿಯೂ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದರು.

ಆರೋಗ್ಯ ಮತ್ತಷ್ಟು ಹದಗೆಡುತ್ತಿದ್ದಂತೆ, ಅವರಿಗೆ ಉತ್ತಮ ಮತ್ತು ಸುಧಾರಿತ ಚಿಕಿತ್ಸೆ ಕೊಡಿಸಲು ಸಫ್ದರ್‌ಜಂಗ್ ಆಸ್ಪತ್ರೆಯಿಂದ ಗುರ್‌ಗಾಂವ್‌ನ ಮೇದಾಂತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಬೇಕು ಎಂದು ಕೋರಿ ಅವರ ಪತ್ನಿ ಗೀತಾಂಜಲಿ ಆಂಗ್ಮೊ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸರ್ಕಾರದ ನಿಲುವನ್ನು ಕೇಳಿತ್ತು. ಕುಟುಂಬದವರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವಿಚಾರದಲ್ಲಿ ತನಗೆ ಯಾವುದೇ ಅಭ್ಯಂತರವಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ವೈದ್ಯರ ಅನುಮತಿಯೊಂದಿಗೆ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಬಹುದು ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಗೆ ಅರಿಕೆ ಮಾಡಿದರು.

ಈ ವಿಷಯದಲ್ಲಿ ವೈದ್ಯರ ಸಲಹೆಯಂತೆ ಮುಂದುವರಿಯಬಹುದು ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದರು. ಅವರ ಆರೋಗ್ಯ ರಕ್ಷಣೆಗೆ ವೈದ್ಯರೇ ಸೂಕ್ತ ನಿರ್ಧಾರ ತಳೆಯಲಿದ್ದಾರೆ ಎಂದರು. ಆದಾಗ್ಯೂ, ವಾಂಗ್ಚುಕ್ ಅವರ ಸುತ್ತಲಿರುವ ಕೆಲವರ ನಡವಳಿಕೆಯ ಬಗ್ಗೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿಯನ್ನು ಕೆಲವರು ಸ್ವಾರ್ಥಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇరుಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ವಾಂಗ್ಚುಕ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಹಸಿರುನಿಶಾನೆ ತೋರಿದೆ. ಸಫ್ದರ್‌ಜಂಗ್‌ನಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆಯನ್ನೇ ಮೇದಾಂತದಲ್ಲೂ ಮುಂದುವರಿಸಬೇಕು ಹಾಗೂ ಈ ವಿಚಾರದಲ್ಲಿ ವೈದ್ಯರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದೆ. ಅಲ್ಲಿ ವಿಶೇಷ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದೆ.

ವಾಂಗ್ಚುಕ್ ಅವರ ಆರೋಗ್ಯ ಮತ್ತು ಕ್ಷೇಮವೇ ನಮಗೆ ಮುಖ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅವರಿಗೆ ನೀಡಲಾದ ಚಿಕಿತ್ಸೆಯ ವಿವರ ಹಾಗೂ ವರದಿಗಳನ್ನು ಮೇದಾಂತ ಆಸ್ಪತ್ರೆಗೆ ಹಸ್ತಾಂತರಿಸುವಂತೆಯೂ ನಿರ್ದೇಶನ ನೀಡಿದೆ. ಪ್ರಸ್ತುತ ವಾಂಗ್ಚುಕ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕುಸಿದಿರುವುದರಿಂದ, ಅವರು ಒಆರ್‌ಎಸ್ (ORS) ನಂತಹ ದ್ರವಾಹಾರಗಳನ್ನು ತೆಗೆದುಕೊಳ್ಳಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು