ಎಸ್‌ಐಆರ್‌ ಫಾರ್ಮ್ ಮೇಲೆಯೇ ಪ್ರಧಾನಿ ಮೋದಿ ಹೆಸರು ಬರೆದಿಟ್ಟು ಯುವಕ ಆತ್ಮಹತ್ಯೆ!

ಕರೀಂನಗರ: ರಾಜಣ್ಣ-ಸಿರಿಸಿಲ್ಲ ಜಿಲ್ಲೆಯಲ್ಲಿ 25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಹಾಗೂ ನಂತರದ ಬೆಳವಣಿಗೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಎಲ್ಲಾರೆಡ್ಡಿಪೇಟೆ ಮಂಡಲದ ರಾಚರ್ಲಗೊಲ್ಲಪಲ್ಲಿ ಗ್ರಾಮದ ನಿವಾಸಿ ಪಿಟ್ಲ ವಂಶಿ ಬುಧವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ಗುರುವಾರ ಬೆಳಿಗ್ಗೆ ಆತನ ಮೃತದೇಹ ಪತ್ತೆಯಾಗಿದೆ.

ಮೃತನ ತಂದೆ ಬಾಲಯ್ಯ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಶೇಷ ಸಮಗ್ರ ಪರಿಷ್ಕರಣೆ (SIR) ಫಾರ್ಮ್ ಮೇಲೆಯೇ ಬರೆಯಲಾದ ಡೆತ್‌ನೋಟ್‌ ವಶಪಡಿಸಿಕೊಂಡಿದ್ದು, ಅದನ್ನು ವಿಧಿವಿಜ್ಞಾನ (ಫೊರೆನ್ಸಿಕ್) ವಿಶ್ಲೇಷಣೆಗೆ ಕಳುಹಿಸಲಾಗಿದೆ.

ದೂರಿನ ಪ್ರಕಾರ, ವಂಶಿ ಬುಧವಾರ ರಾತ್ರಿ ತನ್ನ ತಾಯಿಯೊಂದಿಗೆ ಜಗಳವಾಡಿದ್ದ, ಮಾರನೇ ದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ವಂಶಿ ಮದ್ಯಪಾನಕ್ಕೆ ದಾಸನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆಯ ನಂತರ ವಂಶಿ ಅವರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಬಿಆರ್‌ಎಸ್ ನಾಯಕರು ಪ್ರಧಾನಿ ವಿರುದ್ಧ ಪ್ಲಕಾರ್ಡ್‌ಗಳನ್ನು ಪ್ರದರ್ಶಿಸಿದಾಗ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿತು.

ಪೊಲೀಸರು ಅನುಮತಿ ನಿರಾಕರಿಸಿದ್ದರೂ ಬಿಆರ್‌ಎಸ್ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಪೊಲೀಸರನ್ನು ಪ್ರಶ್ನಿಸಿದರು. ಈ ಸಂಬಂಧ ಏಳು ಬಿಆರ್‌ಎಸ್ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿದ್ದ ಸಬ್ ಇನ್‌ಸ್ಪೆಕ್ಟರ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು