ಕೋಮು ಸೌಹಾರ್ದಕ್ಕೆ ಧಕ್ಕೆ ಸಿ.ಟಿ. ರವಿ ವಿರುದ್ಧ ಕ್ರಮಕ್ಕೆ ಆಗ್ರಹ

ಹಾಸನ: ಚಿಕ್ಕಮಗಳೂರು ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮುಸ್ಲಿಂ ಸಮುದಾಯದ ಕುರಿತು ನೀಡಿರುವ ಹೇಳಿಕೆ ಸಮಾಜದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವಂತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಂಗ್ ಇಂಡಿಯಾ ಯೂತ್ ಆರ್ಗನೈಸೇಶನ್ ರಾಜ್ಯಾಧ್ಯಕ್ಷ ಮೆಹರಾಜ್ ಪಾಷಾ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ಕುರಿತು ಮಾತನಾಡುವ ವೇಳೆ ಸಿ.ಟಿ. ರವಿ ಅವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷದ ವಾತಾವರಣ ನಿರ್ಮಿಸುವ ಅಪಾಯವಿದೆ ಎಂದು ಆರೋಪಿಸಿದರು. ಇದೇ ವೇಳೆ, ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಹಾರದಲ್ಲಿ ನಡೆದ ಅಪಘಾತದ ವಿಡಿಯೊವನ್ನು ದೆಹಲಿಯ ಜಂತರ್-ಮಂತರ್‌ನಲ್ಲಿ ನಡೆದ ಘಟನೆ ಎಂದು ತಪ್ಪು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ದೂರಿದರು.ಈ ರೀತಿಯ ಬೇಜವಾಬ್ದಾರಿಯುತ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಯಂಗ್ ಇಂಡಿಯಾ ಯೂತ್ ಆರ್ಗನೈಸೇಶನ್ ತೀವ್ರವಾಗಿ ಖಂಡಿಸುತ್ತದೆ.

ಮುಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿ ಅಥವಾ ಜನಪ್ರತಿನಿಧಿಗಳು ಇದೇ ರೀತಿಯ ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಉಂಟುಮಾಡುವ ಹೇಳಿಕೆಗಳನ್ನು ನೀಡಿದರೆ, ಭಾರತದ ಸಂವಿಧಾನದ ಚೌಕಟ್ಟಿನೊಳಗೆ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮೆಹರಾಜ್ ಪಾಷಾ, ಸಲೀಂ, ಮಾಹಿಲ್, ಸಾಹಿಲ್ ಹಾಗೂ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು