ಕೇರಳದಲ್ಲಿ ಭಾರಿ ಮಳೆ, ವ್ಯಾಪಕ ಭೂಕುಸಿತ – ಮೂವರ ದುರ್ಮರಣ

ಕೇರಳ : ಭಾರೀ ಮಳೆಯ ಪರಿಣಾಮ ಇಡುಕ್ಕಿ ಜಿಲ್ಲೆಯಲ್ಲಿ ವ್ಯಾಪಕ ಭೂಕುಸಿತ (Landslide) ಸಂಭವಿಸಿದೆ. ಇಡುಕ್ಕಿ ಹಾಗೂ ಕೊಟ್ಟಾಯಂ (Kottayam) ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವರು ಮಣ್ಣಿನಡಿಯೇ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ಮುಂದುವರಿದಿದೆ. ಇಡುಕ್ಕಿಯ ವಾಗಮನ್ (Vagamon) ಪ್ರದೇಶದಲ್ಲಿ ಭೂಕುಸಿತ ಮನೆ ಮೇಲೆ ಬಿದ್ದ ಪರಿಣಾಮ ವೈಕಂ ಮೂಲದ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ. ಆದ್ರೆ, ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆಯೇ ಜಿಲ್ಲೆಯ ಸಣ್ಣ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ಅಣೆಕಟ್ಟುಗಳ ಗೇಟ್‌ಗಳನ್ನ ತೆರೆಯಲು ಅಧಿಕಾರಿಗಳು ಆದೇಶಿಸಿದ್ದಾರೆ

ಅಡೂರ್ಮಲಾದಲ್ಲೂ ಭೂಕುಸಿತ
ಇಡುಕ್ಕಿಯ ಅಡೂರ್ಮಲಾ ಪ್ರದೇಶದಲ್ಲೂ ಭೂಕುಸಿತ ಸಂಭವಿಸಿದ್ದು, ಒಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಇದೇ ವೇಳೆ ಕೊಚ್ಚಿ–ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯ ಅಡಿಮಾಲಿ ಸಮೀಪದ ಮಚ್ಚಿಪ್ಲಾವು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೇ ದಿನ ಇಡುಕ್ಕಿಯ ಮತ್ತೊಂದು ಭಾಗದಲ್ಲಿ ಭೂಕುಸಿತ ಮನೆ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 

ಕೊಟ್ಟಾಯಂನಲ್ಲಿ ಯುವಕ ಸಾವು
ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತ್ತೊಟ್ಟಂ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಹ್ನಿಯವರ ಪುತ್ರ ಜೋಸೆಫ್ ಮೃತಪಟ್ಟಿದ್ದಾರೆ. ಅವರ ತಾಯಿ ಮಣ್ಣಿನಡಿ ಸಿಲುಕಿರುವ ಶಂಕೆ ಇದ್ದು, ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದೆ.

ವಾಗಮನ್‌ನಲ್ಲಿ ಮತ್ತೊಬ್ಬ ಸಿಲುಕಿರುವ ಶಂಕೆ
ವಾಗಮನ್ ಪ್ರದೇಶದಲ್ಲಿ ಮತ್ತೊಂದು ಭೂಕುಸಿತ ಮನೆ ಮೇಲೆ ಬಿದ್ದಿದ್ದು, ಒಬ್ಬರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ರಸ್ತೆ ಮೇಲೆ ಮಣ್ಣು ಹಾಗೂ ಬಂಡೆಗಳು ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕೊಟ್ಟಾಯಂನಲ್ಲಿ ಪ್ರವಾಹ ಪರಿಸ್ಥಿತಿ
ಕೊಟ್ಟಾಯಂ ಜಿಲ್ಲೆಯ ಎರಟ್ಟುಪೇಟ, ಕಂಜಿರಪ್ಪಳ್ಳಿ, ಕೂಟ್ಟಿಕ್ಕಲ್ ಹಾಗೂ ಎರುಮೇಲಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಹಲವು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು