ಜನರ ಮೇಲೆ ಇ-20 ಪೆಟ್ರೋಲ್ ಹೇರಬೇಡಿ: ಪ್ರಧಾನಿ ನಿವಾಸಕ್ಕೆ ಮಾರ್ಚ್ ನಡೆಸುತ್ತಿದ್ದ ಕೇಜ್ರಿವಾಲ್ ತಡೆದ ದೆಹಲಿ ಪೊಲೀಸ್; ರಸ್ತೆಯಲ್ಲೇ ಧರಣಿ ಕುಳಿತ ಎಎಪಿ ನಾಯಕರು

ದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ಮಂಗಳವಾರ ಇ-20 (E20) ಪೆಟ್ರೋಲ್ ವಿರುದ್ಧ ನಡೆಸುತ್ತಿದ್ದ ಮಾರ್ಚ್ ಅನ್ನು ದೆಹಲಿ ಪೊಲೀಸರು ತಡೆದಿದ್ದಾರೆ. ಸುಮಾರು 100 ಜನರೊಂದಿಗೆ ಪ್ರಧಾನಿಯವರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು.

ತಮ್ಮ ಮಾರ್ಚ್ ಅನ್ನು ಪೊಲೀಸರು ತಡೆದಿದ್ದಕ್ಕೆ ಆಕ್ರೋಶಗೊಂಡ ಆಮ್ ಆದ್ಮಿ ಪಾರ್ಟಿಯ ನಾಯಕರು ಫಿರೋಜ್ ಶಾ ರಸ್ತೆಯಲ್ಲೇ ಧರಣಿ ಕುಳಿತರು.

ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಕೇಜ್ರಿವಾಲ್, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಯಬಾರದು ಮತ್ತು ಜನರ ಮೇಲೆ ಇ-20 ಪೆಟ್ರೋಲ್ ಅನ್ನು ಬಲವಂತವಾಗಿ ಹೇರಬಾರದು ಎಂದು ನಾವು ಒತ್ತಾಯಿಸುತ್ತೇವೆ,” ಎಂದಿದ್ದಾರೆ. ಈ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ಭಾಗವಹಿಸಿದ್ದರು.

ಕೆಲವು ದಿನಗಳ ಹಿಂದೆಯಷ್ಟೇ ಆಮ್ ಆದ್ಮಿ ಪಾರ್ಟಿಯು ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಈ ಕುರಿತು ರಾಷ್ಟ್ರೀಯ ಟೌನ್‌ಹಾಲ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪೆಟ್ರೋಲ್ ಬಂಕ್‌ಗಳಲ್ಲಿ ಎಥನಾಲ್ ಮಿಶ್ರಿತ ಇ-20 ಪೆಟ್ರೋಲ್ ಅಥವಾ ಸಾಮಾನ್ಯ ಪೆಟ್ರೋಲ್ ಅನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ವಾಹನ ಸವಾರರಿಗೆ ನೀಡಬೇಕು ಎಂದು ಕೇಜ್ರಿವಾಲ್ ಆ ಕಾರ್ಯಕ್ರಮದಲ್ಲಿ ಆಗ್ರಹಿಸಿದ್ದರು.

ಮೋದಿ ಸರ್ಕಾರ ದೇಶದ ಜನರ ಮಾತನ್ನು ಕೇಳುವ ಬದಲು ಡೊನಾಲ್ಡ್ ಟ್ರಂಪ್ ಅವರ ಮಾತನ್ನು ಕೇಳುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಆರೋಪಿಸಿದ್ದರು. “ಇ-20 ಪೆಟ್ರೋಲ್‌ನಿಂದ ಜನರು ಈಗಾಗಲೇ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಂಬರುವ 5 ವರ್ಷಗಳಲ್ಲಿ 20 ಶತಕೋಟಿ ಡಾಲರ್ ಮೌಲ್ಯದ ಎಥನಾಲ್ ಖರೀದಿಸಲು ಸಿದ್ಧತೆ ನಡೆಸಲಾಗುತ್ತಿದೆ,” ಎಂದು ಹೇಳಿದ್ದ ಕೇಜ್ರಿವಾಲ್, “ಕೊನೆಗೂ ಈ ಒಪ್ಪಂದ ಯಾರ ಲಾಭಕ್ಕಾಗಿ ನಡೆಯುತ್ತಿದೆ?” ಎಂದು ಪ್ರಶ್ನಿಸಿದ್ದರು.

ಕಳೆದ ಕೆಲವು ತಿಂಗಳುಗಳಿಂದ ಅರವಿಂದ್ ಕೇಜ್ರಿವಾಲ್ ಇ-20 ಪೆಟ್ರೋಲ್ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಅಮೆರಿಕದ ಎಥನಾಲ್ ಭಾರತದಲ್ಲಿ ಮಾರಾಟವಾಗಬೇಕು ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಶಯವಾಗಿದೆ ಎಂದು ಆರೋಪಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು