ಗಿಡ ನೆಡಲು ಬೆಳೆದ ಮರಗಳನ್ನೇ ಕಡಿದು ಹಾಕಿದರು: ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಪರಿಸರ ರಕ್ಷಣೆಯ ಪರಿಯಿದು!

ಭೋಪಾಲ್: ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಕೈಗೊಳ್ಳಲಾದ ಸಸಿ ನೆಡುವ ಕಾರ್ಯಕ್ರಮವು ತೀವ್ರ ವಿವಾದಕ್ಕೆ ಈಡಾಗಿದೆ.

ಹೊಸ ಸಸಿಗಳನ್ನು ನೆಡಲು ನೂರಾರು ದೊಡ್ಡ ಮರಗಳನ್ನು ಕಡಿದು ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಅರಣ್ಯೀಕರಣ ಯೋಜನೆಗಳ ಅನುಷ್ಠಾನದ ವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಭೋಪಾಲ್ ಮಹಾನಗರ ಪಾಲಿಕೆಯು (ಬಿಎಮ್‌ಸಿ) ಸುಮಾರು 10,000 ಸಸಿಗಳನ್ನು ನೆಡಲು ಗುತ್ತಿಗೆ ನೀಡಿದ್ದ ಕಲಿಯಾಸೋಟ್ ಪ್ರದೇಶದಲ್ಲಿ ಈ ಮರಗಳ ಕಡಿತ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಮುಳ್ಳಿನ ಪೊದೆಗಳನ್ನು ತೆರವುಗೊಳಿಸಲು ಗುತ್ತಿಗೆದಾರನಿಗೆ ಸೂಚಿಸಲಾಗಿದ್ದರೂ, ಅತ್ಯಂತ ಆರೋಗ್ಯಕರವಾಗಿದ್ದ ಹಸಿರು ಮರಗಳನ್ನು ಕಡಿದು ಹಾಕಲಾಗಿದೆ. ಬೆಳೆದ ದೊಡ್ಡ ಮರಗಳನ್ನು ಕಡಿದು ಆ ಜಾಗದಲ್ಲಿ ಸಸಿಗಳನ್ನು ನೆಟ್ಟರೆ ಅವು ಬೆಳೆಯಲು ಎಷ್ಟು ಸಮಯ ಬೇಕಾಗುತ್ತದೆ, ಅದಕ್ಕಿಂತ ಬೆಳೆದ ಮರಗಳನ್ನು ಸಂರಕ್ಷಿಸುವುದರಿಂದ ಪರಿಸರಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಬಿಎಮ್‌ಸಿ ಅಧ್ಯಕ್ಷ ಕಿಶನ್ ಸೂರ್ಯವಂಶಿ, ಪ್ರಾಥಮಿಕ ತನಿಖೆಯಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯ ಕಂಡುಬಂದಿದ್ದು, ಆತನಿಗೆ 3.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು