ಬೈಕ್‌ ಟ್ಯಾಕ್ಸಿ ವಿರುದ್ಧ RTO ಕಾರ್ಯಾಚರಣೆ ಸ್ಪಷ್ಟ ನೀತಿಗೆ – ಚಾಲಕರ ಒತ್ತಾಯ

ಬೆಂಗಳೂರು : ರಾಜಧಾನಿಯಲ್ಲಿ ಅನಧಿಕೃತ ಬೈಕ್‌ ಟ್ಯಾಕ್ಸಿ ಸೇವೆಗಳ ವಿರುದ್ಧ ಸಾರಿಗೆ ಇಲಾಖೆಯ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ಗುರುವಾರ ಅಧಿಕಾರಿಗಳು 220 ದ್ವಿಚಕ್ರ ವಾಹನಗಳನ್ನು ಪರಿಶೀಲಿಸಿ, ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದ 70 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ, ಸಂಬಂಧಿತ ಚಾಲಕರ ಚಾಲನಾ ಪರವಾನಗಿ (DL) ಹಾಗೂ ವಾಹನದ ನೋಂದಣಿ ಪ್ರಮಾಣಪತ್ರ (RC) ಅಮಾನತುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ನಗರದ 11 ಆರ್‌ಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪ್ರಯಾಣಿಕರಂತೆ ಅಗ್ರಿಗೇಟರ್‌ ಆ್ಯಪ್‌ಗಳಲ್ಲಿ ರೈಡ್‌ ಬುಕ್ ಮಾಡಿ ಬೈಕ್‌ ಟ್ಯಾಕ್ಸಿಗಳನ್ನು ಪತ್ತೆಹಚ್ಚುವ ತಂತ್ರವನ್ನು ಬಳಸಿದರು. ಜೊತೆಗೆ, ರಸ್ತೆಯಲ್ಲೇ ವಾಹನಗಳನ್ನು ತಡೆದು ದಾಖಲೆಗಳ ಪರಿಶೀಲನೆಯನ್ನೂ ನಡೆಸಿದರು.

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತೆ ಓಂಕಾರೇಶ್ವರಿ ಮಾತನಾಡಿ, “ಗುರುವಾರ 220 ದ್ವಿಚಕ್ರ ವಾಹನಗಳನ್ನು ಪರಿಶೀಲಿಸಿದ್ದು, ಈ ಪೈಕಿ 70 ಬೈಕ್‌ ಟ್ಯಾಕ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಬಂಧಿತ ಚಾಲಕರ DL ಮತ್ತು RC ಅಮಾನತುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗುತ್ತದೆ,” ಎಂದು ತಿಳಿಸಿದರು.

ಇನ್ನೊಂದೆಡೆ, ಈ ಕ್ರಮಕ್ಕೆ ಬೈಕ್‌ ಟ್ಯಾಕ್ಸಿ ವೆಲ್ಫೇರ್‌ ಅಸೋಸಿಯೇಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೈಕೋರ್ಟ್‌ ಆದೇಶದ ವಿರುದ್ಧವಾಗಿ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ ಹಾಗೂ ಕೆಲವು ಕಡೆ ಆಟೋ ಚಾಲಕರಿಂದ ಹಲ್ಲೆ ನಡೆಯುತ್ತಿದೆ ಎಂದು ಆರೋಪಿಸಿರುವ ಸಂಘ, ಲಕ್ಷಾಂತರ ಚಾಲಕರ ಜೀವನೋಪಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ತಕ್ಷಣವೇ ಬೈಕ್‌ ಟ್ಯಾಕ್ಸಿ ಸೇವೆಗೆ ಸ್ಪಷ್ಟ ನೀತಿ ರೂಪಿಸಬೇಕೆಂದು ಒತ್ತಾಯಿಸಿದೆ.

Related Articles

ಇತ್ತೀಚಿನ ಸುದ್ದಿಗಳು