ಸರ್ಕಾರದ ವಿರೋಧ ದೇಶದ್ರೋಹವಲ್ಲ: ಜೆನ್-ಝೀ ಪ್ರತಿಭಟನೆ ವಿಚಾರದಲ್ಲಿ ಮೋಹನ್ ಭಾಗವತ್ ಪರ ನಿಂತ ಉಮರ್ ಅಬ್ದುಲ್ಲಾ; ಗೃಹ ಸಚಿವರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದ ಕಾಂಗ್ರೆಸ್

ಅಂತರರಾಷ್ಟ್ರೀಯ ಏಕೀಕರಣ ಆಂದೋಲನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ದೇಶವಿರೋಧಿ ಏನೂ ಇಲ್ಲ ಎಂದು ಉಮರ್ ಅಬ್ದುಲ್ಲಾ ಸಮರ್ಥಿಸಿಕೊಂಡಿದ್ದಾರೆ.

ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಮರ್ ಅಬ್ದುಲ್ಲಾ, “ಮೋಹನ್ ಭಾಗವತ್ ಅವರ ಮಾತುಗಳಲ್ಲಿ ಸುಳ್ಳೇನೂ ಇಲ್ಲ. ಜೆನ್-ಜಿ (Gen-Z) ಪೀಳಿಗೆಯ ಪ್ರತಿಭಟನೆಯು ಅವರ ಹಕ್ಕು ಮತ್ತು ನ್ಯಾಯಬದ್ಧ ಬೇಡಿಕೆಗಳಿಗಾಗಿ ನಡೆಯುತ್ತಿತ್ತು. ಅವರು ಹೇಳಿದ್ದರಲ್ಲಿ ದೇಶವಿರೋಧಿ ಏನೂ ಇರಲಿಲ್ಲ. ಅದು ಖಂಡಿತವಾಗಿಯೂ ಸರ್ಕಾರದ ವಿರುದ್ಧವಾಗಿತ್ತು, ಮತ್ತು ಈ ವ್ಯತ್ಯಾಸವನ್ನು ಮೋಹನ್ ಭಾಗವತ್ ಒಪ್ಪಿಕೊಂಡಿರುವುದು ಒಳ್ಳೆಯ ವಿಷಯ,” ಎಂದಿದ್ದಾರೆ.

ಸರ್ಕಾರದ ವಿರೋಧ ದೇಶದ ವಿರೋಧವಲ್ಲ

ಉಮರ್ ಅಬ್ದುಲ್ಲಾ ಮುಂದುವರಿದು, “ಆಡಳಿತ ಅಥವಾ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ದೇಶವನ್ನು ವಿರೋಧಿಸುವುದಕ್ಕೆ ಸಮನಲ್ಲ. ಹಲವು ಬಾರಿ, ಸರ್ಕಾರದ ವಿರೋಧವು ದೇಶಕ್ಕೆ ಲಾಭದಾಯಕವಾಗುತ್ತದೆ, ಏಕೆಂದರೆ ಅದು ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡುತ್ತದೆ… ಮೋಹನ್ ಭಾಗವತ್ ಅವರ ಹೇಳಿಕೆಯ ನಂತರ, ವಿದ್ಯಾರ್ಥಿಗಳ ವಿರುದ್ಧ ಕೈಗೊಳ್ಳಲಾಗುತ್ತಿರುವ ಎಲ್ಲಾ ಕಾನೂನು ಕ್ರಮಗಳನ್ನು ತಕ್ಷಣವೇ ಕೈಬಿಡಬೇಕು,” ಎಂದು ಆಗ್ರಹಿಸಿದರು.

ರಾಂಚಿಯಲ್ಲಿ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ (JPSC-JSSC) ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಮಾತನಾಡಿದ ಅವರು, “ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮಕ್ಕಳ ಈ ಬೇಡಿಕೆಗಳನ್ನು ನಿರ್ಲಕ್ಷಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರನ್ನು ಕರೆದು ಮಾತುಕತೆ ನಡೆಸಬೇಕು,” ಎಂದರು. ಇನ್ನೊಂದೆಡೆ, ಕಾಂಗ್ರೇಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಕುರಿತು ಪ್ರತಿಕ್ರಿಯಿಸಿ, “ಜೆನ್-ಜಿ ಪೀಳಿಗೆಗೆ ಮೋಹನ್ ಭಾಗವತ್ ಅವರಿಂದ ಯಾವುದೇ ರೀತಿಯ ಸರ್ಟಿಫಿಕೇಟ್ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ.

ಗೃಹ ಸಚಿವರಿಂದ ರಾಜೀನಾಮೆ ಪಡೆದುಕೊಳ್ಳಿ: ಕೆ. ಸಿ. ವೇಣುಗೋಪಾಲ್

ಈ ವಿಷಯದ ಕುರಿತು ಹರಿಹಾಯ್ದ ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್, “ಆರ್‌ಎಸ್‌ಎಸ್‌ಗೆ ಜೆನ್-ಜಿ ಪೀಳಿಗೆಯ ಬಗ್ಗೆ ಸ್ವಲ್ಪವಾದರೂ ಪ್ರಾಮಾಣಿಕತೆ ಇದ್ದರೆ, ಅವರು ಮೊದಲು ಭಾರತದ ಗೃಹ ಸಚಿವರಿಂದ ರಾಜೀನಾಮೆ ಪಡೆಯಲಿ, ಇಲ್ಲದಿದ್ದರೆ ಕನಿಷ್ಠ ಪಕ್ಷ ಸಂಸತ್ತಿಗೆ ಬಂದು ವಿದ್ಯಾರ್ಥಿಗಳ ಕ್ಷಮೆ ಕೇಳುವಂತೆ ಮಾಡಲಿ. ಆರ್‌ಎಸ್‌ಎಸ್ ಸರ್ಕಾರವನ್ನು ನಿಯಂತ್ರಿಸುತ್ತಿದೆ, ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಗಳನ್ನು ಅವರು ಖಂಡಿಸಬೇಕು,” ಎಂದು ಒತ್ತಾಯಿಸಿದರು.

ವೇಣುಗೋಪಾಲ್ ಮುಂದುವರಿದು, “ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಹಾಗೂ ಬಲಪ್ರಯೋಗ ಮಾಡಲಾಗಿತ್ತು. ವಿದ್ಯಾರ್ಥಿಗಳು ಅದಕ್ಕೆ ಹೊಣೆಗಾರಿಕೆಯನ್ನು ಕೋರುತ್ತಿದ್ದಾರೆ. ಈ ವಿಷಯದಲ್ಲಿ ಅವರು ಏಕೆ ಮೌನವಾಗಿದ್ದಾರೆ? ಇವೆಲ್ಲವೂ ಕೇವಲ ನಾಟಕ,” ಎಂದು ಕಿಡಿಕಾರಿದರು. ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, “ವಿದ್ಯಾರ್ಥಿಗಳು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಎಲ್ಲಿಯೇ ಪ್ರತಿಭಟನೆ ನಡೆಸಿದರೂ ನಾವು ಅವರ ಪರವಾಗಿ ನಿಲ್ಲುತ್ತೇವೆ. ರಾಹುಲ್ ಗಾಂಧಿ ನಿನ್ನೆ ಹೇಳಿದ್ದು ಕೂಡ ಇದನ್ನೇ,” ಎಂದಿದ್ದಾರೆ.

ಆಜಾದ್ ಸಮಾಜ ಪಾರ್ಟಿ (ಕಾನ್ಶಿರಾಮ್) ಅಧ್ಯಕ್ಷ ಹಾಗೂ ಸಂಸದ ಚಂದ್ರಶೇಖರ್ ಆಜಾದ್ ಮಾತನಾಡಿ, “ಆರ್‌ಎಸ್‌ಎಸ್ ಮುಖ್ಯಸ್ಥರು ಈ ಮಾತನ್ನು ನಮಗೆ ಅಥವಾ ದೇಶಕ್ಕೆ ಹೇಳುವ ಬದಲು, ಸರ್ಕಾರಕ್ಕೆ ಜಾತಿ ಗಣತಿ ನಡೆಸಿ ಅದರ ಅಂಕಿಅಂಶಗಳನ್ನು ಬಹಿರಂಗಪಡಿಸಲು ಹೇಳಲಿ,” ಎಂದಿದ್ದಾರೆ.

ಮೋಹನ್ ಭಾಗವತ್ ಹೇಳಿದ್ದೇನು?

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ‘ಜೆನ್ ಜಿ’ ಯುವಜನತೆ ದೇಶವಿರೋಧಿಗಳಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ಧ್ವನಿ ಹಾಗೂ ಮಾರ್ಗವಾಗಿದೆ ಎಂದು ಹೇಳಿದ್ದರು. ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನೈಜ ಎಂದು ಬಣ್ಣಿಸಿದ್ದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು