ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ – ಜಲಫಿರಂಗಿ ಹಾಗೂ ಲಾಠಿಚಾರ್ಜ್

ರಾಂಚಿ : ಜಾರ್ಖಂಡ್‌ನಲ್ಲಿ (Jharkhand) ಉದ್ಯೋಗ ನೇಮಕಾತಿ ಪರೀಕ್ಷೆಗಳ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು (Student protest) ನಡೆಸುತ್ತಿರುವ ಸುದೀರ್ಘ ಹೋರಾಟವು 17ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ತೀವ್ರ ಸ್ವರೂಪಕ್ಕೆ ತಿರುಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ರಾಜಧಾನಿ ರಾಂಚಿಯಲ್ಲಿ ಬೃಹತ್ ರ‍್ಯಾಲಿ ನಡೆಸಿ ವಿಧಾನಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬ್ಯಾರಿಕೇಡ್‌ಗಳನ್ನು ಭೇದಿಸಿ ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ (Water Cannon) ಹಾಗೂ ಲಾಠಿಚಾರ್ಜ್ (Lathi Charge) ನಡೆಸಿದ್ದಾರೆ. ಜೆಪಿಎಸ್‌ಸಿ (JPSC) ಮತ್ತು ಜೆಎಸ್‌ಎಸ್‌ಸಿ (JSSC) ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಭಾರಿ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ನಡೆದಿದೆ ಎಂದು ಆರೋಪಿಸಿ ‘JPSC-JSSC ಸುಧಾರಣಾ ಮಂಚ’ದ ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಕಳೆದ 16 ದಿನಗಳಿಂದ ಸತತ ಹೋರಾಟ ನಡೆಸುತ್ತಿದ್ದರು. ಸೋಮವಾರ ‘ವಿಧಾನಸಭಾ ಘೇರಾವ್’ ಚಳವಳಿಗೆ ಕರೆ ನೀಡಿದ್ದರಿಂದ ಬೆಳಿಗ್ಗೆಯಿಂದಲೇ ಬಸ್‌ಗಳು ಹಾಗೂ ರೈಲುಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳು ರಾಂಚಿಗೆ ಹರಿದುಬಂದಿದ್ದರು. ಜಗನ್ನಾಥ ದೇವಾಲಯ ಸಮೀಪ ಹಾಗೂ ಶಾಸನಸಭೆಯತ್ತ ತೆರಳುವ ಮಾರ್ಗಗಳಲ್ಲಿ ಪೊಲೀಸರು ಹಾಕಿದ್ದ ಭದ್ರತಾ ಬ್ಯಾರಿಕೇಡ್‌ಗಳನ್ನು ವಿದ್ಯಾರ್ಥಿಗಳು ಹಾರಿಕೊಂಡು ಮುನ್ನುಗ್ಗಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಅವರು ಆಂಬ್ಯುಲೆನ್ಸ್ ಮೂಲಕ ಆಗಮಿಸಿ, ಸ್ಟ್ರೆಚರ್‌ನಲ್ಲಿಯೇ ಪ್ರತಿಭಟನಾ ಸ್ಥಳಕ್ಕೆ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಕಂಡುಬಂತು. ರಾಜ್ಯ ಸರ್ಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಸಂಪೂರ್ಣ ಪರೀಕ್ಷಾ ಅಕ್ರಮದ ಕುರಿತು ಸಿಬಿಐ (CBI) ತನಿಖೆಗೆ ಆದೇಶಿಸಬೇಕು ಎಂದು ಪ್ರತಿಭಟನಾಕಾರರು ಪ್ರಬಲವಾಗಿ ಆಗ್ರಹಿಸಿದ್ದಾರೆ.

ಇದುವರೆಗೆ ಸರ್ಕಾರಿ ಸಮಿತಿ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿ ನಾಯಕರ ನಡುವೆ ನಡೆದ ಆರು ಸುತ್ತಿನ ಮಾತುಕತೆಗಳು ಸಂಪೂರ್ಣ ವಿಫಲವಾಗಿವೆ. ಪರೀಕ್ಷೆಗಳಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲು ಸರ್ಕಾರ ಒಪ್ಪಿಕೊಂಡಿದೆಯಾದರೂ, ವಿದ್ಯಾರ್ಥಿಗಳು ಒಟ್ಟು 13 ಪರೀಕ್ಷೆಗಳ ರದ್ದು ಹಾಗೂ ನಿಷ್ಪಕ್ಷಪಾತ ಸಿಬಿಐ ತನಿಖೆಗೆ ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಂಚಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ವಹಿಸಲಾಗಿದೆ. ನಗರದ ಪ್ರಮುಖ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

Related Articles

ಇತ್ತೀಚಿನ ಸುದ್ದಿಗಳು