ನನ್ನ ಮತದಾನದ ಹಕ್ಕನ್ನು ಕಿತ್ತುಕೊಂಡಿದ್ದಾರೆ… ಆಟ ಈಗ ಶುರುವಾಗಿದೆ, ನೋಡೋಣ ಮುಂದೆ: ಪ್ರಕಾಶ್ ರಾಜ್

SIR (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯ ಭಾಗವಾಗಿ ಪ್ರಸಿದ್ಧ ಚಲನಚಿತ್ರ ನಟ ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಗಾಯಬ್ ಆಗಿದೆ. ತಮ್ಮ ಸ್ವಂತ ಕ್ಷೇತ್ರದಲ್ಲಿಯೇ ತಮ್ಮ ಮತ ಕೈತಪ್ಪಿರುವುದಕ್ಕೆ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ಇದೇ ಕ್ಷೇತ್ರದಲ್ಲಿ ಎಂಪಿ ಅಭ್ಯರ್ಥಿಯಾಗಿದ್ದ ತಮ್ಮ ಮತವೇ ಹೇಗೆ ಇಲ್ಲದಂತಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಅವರು ‘ಜಸ್ಟ್ ಆಸ್ಕಿಂಗ್’ (Just Asking) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. “ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 65 ಲಕ್ಷ ಮತದಾರರಲ್ಲಿ ನಾನೂ ಒಬ್ಬ. ನಾನು ಇಲ್ಲೇ ಹುಟ್ಟಿ ಬೆಳೆದವನು. ಇಲ್ಲಿಂದಲೇ ಎಂಪಿ ಚುನಾವಣೆಯಲ್ಲೂ ಸ್ಪರ್ಧಿಸಿದ್ದೆ. ಯಾವ್ಯಾವ ದಾಖಲೆಗಳನ್ನು ಕೇಳುತ್ತಾರೋ ನೋಡೋಣ. ಮೋದಿ… ಗೇಮ್ ಆನ್. ನಿಮಗೆ ಮತ ಹಾಕದವರನ್ನು ಪಟ್ಟಿಯಿಂದ ತೆಗೆದುಹಾಕುವ ಅಧಿಕಾರ ನಿಮ್ಮ ಬಳಿ ಇರಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವುದನ್ನು ತಡೆಯಲು ನಿಮ್ಮಿಂದ ಸಾಧ್ಯವೇ?” ಎಂದು ಪ್ರಕಾಶ್ ರಾಜ್ ಸವಾಲೆಸೆದಿದ್ದಾರೆ.

“ಪ್ರಿಯ ಗೆಳೆಯರೇ… ನಿಮ್ಮೊಂದಿಗೆ ಒಂದು ತಮಾಷೆಯ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಬೆಂಗಳೂರು ಕ್ಷೇತ್ರದಲ್ಲಿ SIR ಪ್ರಕ್ರಿಯೆಯ ನಂತರ ಮತದಾನದ ಹಕ್ಕು ಕಳೆದುಕೊಂಡ 65 ಲಕ್ಷ ಮತದಾರರಲ್ಲಿ ನಾನೂ ಒಬ್ಬ. ಇದೊಂದು ತಮಾಷೆಯಲ್ವೇ? ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿದೆ, ಇಲ್ಲೇ ಬೆಳೆದೆ, ಇಲ್ಲೇ ಓದಿದೆ. ನನ್ನ ರಂಗಭೂಮಿ, ನನ್ನ ಕಲೆ ಎಲ್ಲವೂ ಇಲ್ಲೇ ಸಾಗಿತು. ನಿಮ್ಮ ಮಾಹಿತಿಗಾಗಿ ಹೇಳುತ್ತಿದ್ದೇನೆ, ನಾನು ಈ ಹಿಂದಿನ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಸರಿ, ಈ ತಮಾಷೆ ಚೆನ್ನಾಗಿದೆ. ಮೂಲತಃ ನನ್ನ ಮತದಾನದ ಹಕ್ಕನ್ನು ಮರಳಿ ಪಡೆಯಲು ನಾನು ದಾಟಬೇಕಾದ ಪ್ರಕ್ರಿಯೆ ಏನು, ಯಾವ್ಯಾವ ಕಾಗದಪತ್ರಗಳನ್ನು ತೋರಿಸಬೇಕೋ ನೋಡೋಣ. ಸರಿ… ಗೇಮ್ ಆನ್… ಆದರೆ ಒಂದು ಸಣ್ಣ ವಿಷಯ. ನಿಮ್ಮನ್ನು ಆಯ್ಕೆ ಮಾಡದ ಪೌರರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ನೀವು ನಿಮ್ಮ ಅಧಿಕಾರವನ್ನು ಬಳಸಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ನಮ್ಮ ಪ್ರಯತ್ನವನ್ನು ತಡೆಯಲು ನಿಮ್ಮಿಂದ ಸಾಧ್ಯವೇ… ಜಸ್ಟ್ ಆಸ್ಕಿಂಗ್…” ಎಂದು ಚಲನಚಿತ್ರ ನಟ ಪ್ರಕಾಶ್ ರಾಜ್ ವೀಡಿಯೊದಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಪ್ರಕಾಶ್ ರಾಜ್ ಅವರು ಕಳೆದ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಇದರ ಜೊತೆಗೆ, ಜಾರ್ಖಂಡ್‌ನಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸರು ನಡೆಸಿದ ದೌರ್ಜನ್ಯವನ್ನೂ ಅವರು ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಹಾಗೂ ಲಾಠಿಚಾರ್ಜ್ ಬಳಸಿರುವುದನ್ನು ತೀವ್ರವಾಗಿ ಟೀಕಿಸಿರುವ ಅವರು, ಹೀಗೇಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರಲ್ಲದೆ, ಕ್ರೌರ್ಯವು ಎಲ್ಲ ಸಮಯದಲ್ಲೂ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು