ಅಡಿಕೆ ಬೆಳೆಯುವ ರಾಜ್ಯದಲ್ಲೇ ಗುಟ್ಕಾ ಬ್ಯಾನ್ ಸರಿಯಲ್ಲ: ಸರ್ಕಾರದ ನಿರ್ಧಾರದ ವಿರುದ್ಧ ಆರಗ ಜ್ಞಾನೇಂದ್ರ ಕಳವಳ

ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿ ಹೊರಡಿಸಿರುವ ಅಧಿಸೂಚನೆಯಿಂದ ಅಡಿಕೆ ಬೆಳೆಗಾರರ ಬದುಕಿಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ 20 ದಿನಗಳಿಂದೀಚೆಗೆ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದೆ. ಅಡಿಕೆ ಬೆಳೆಯುವ ಮೂಲ ರಾಜ್ಯದಲ್ಲೇ ಗುಟ್ಕಾ ನಿಷೇಧ ಮಾಡಿರುವುದರಿಂದ ರೈತರು ತೀವ್ರ ಹಿಂಸೆ ಮತ್ತು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮತ್ತು ರೈತರ ಹಿತ ಕಾಯಲು ಸರ್ವಪಕ್ಷ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಅಡಿಕೆ ಬೆಳೆಯುವ ಕ್ಷೇತ್ರಗಳ ವಿವಿಧ ಪಕ್ಷಗಳ ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ಸಮಯ ಪಡೆದು ನಿಯೋಗ ತೆರಳಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದ 12 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದ್ದು, ಭತ್ತದ ಗದ್ದೆಗಳನ್ನು (ತರಿ ಜಮೀನು) ಪರಿವರ್ತಿಸಿ ರೈತರು ಅಡಿಕೆ ತೋಟ ಮಾಡಿದ್ದಾರೆ. ಒಮ್ಮೆ ಬೆಳೆದ ತೋಟವನ್ನು ಮತ್ತೆ ಕಡಿದು ಹಾಕುವುದು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಅಡಿಕೆ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು