ಈ ದೇಶದಲ್ಲಿ ದಲಿತರಿಗೆ ಜಾಗವಿಲ್ಲ: ಹಲ್ದ್ವಾನಿ ರಾಮಲೀಲಾ ಮೈದಾನ ಶುದ್ಧೀಕರಣಕ್ಕೆ ಖರ್ಗೆ ಆಕ್ರೋಶ; ರಾಜ್ಯಸಭೆಯಲ್ಲಿ ಜೆ.ಪಿ. ನಡ್ಡಾ ವಿಷಾದ

ದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಮಾವೇಶ ನಡೆಸಿ ಭಾಷಣ ಮಾಡಿದ ಎರಡು ದಿನಗಳ ನಂತರ, ಬಲಪಂಥೀಯ ಸಂಘಟನೆಯೊಂದು ರಾಮಲೀಲಾ ಮೈದಾನದಲ್ಲಿ ‘ಶುದ್ಧೀಕರಣ’ದ ನೆಪದಲ್ಲಿ ಹವನ-ಹೋಮ ನಡೆಸಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಈ ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಈ ದೇಶದಲ್ಲಿ ದಲಿತರಿಗೆ ಯಾವುದೇ ಜಾಗವಿಲ್ಲ ಎಂಬುದನ್ನು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ. ಸಾರ್ವಜನಿಕ ಸಮಾವೇಶಗಳು ನಡೆಯುವ ಮೈದಾನದಲ್ಲಿ ಹವನ ಮಾಡುವ ಅಗತ್ಯವೇ ಏನಿತ್ತು? ಈ ಕೃತ್ಯವು ಹಿಂದೂ ಧರ್ಮಕ್ಕೇ ವಿರೋಧವಾಗಿದ್ದು, ಜಾತಿ-ಜಾತಿಗಳ ನಡುವೆ ಜಗಳ ತಂದಿಡುವ ಪ್ರಯತ್ನವಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭೆಯಲ್ಲೂ ಗದ್ದಲ:

ಅಧಿವೇಶನದ ಕೊನೆಯ ದಿನವಾದ ಗುರುವಾರ ರಾಜ್ಯಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಿದ ಖರ್ಗೆ, “ನಾನು ಹಲ್ದ್ವಾನಿ ಸಮಾವೇಶದಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ಹೆಸರು ಎತ್ತದೆ ಕೇವಲ ಸರ್ಕಾರದ ನೀತಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೆ. ಆದರೆ ನನ್ನ ಭಾಷಣದ ನಂತರ ಬಿಜೆಪಿ ಬೆಂಬಲಿತರು ವೇದಿಕೆಯನ್ನು ‘ಶುದ್ಧೀಕರಣ’ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ರಕ್ಷಿಸುವ ರೀತಿಯೇ ಇದು?” ಎಂದು ಪ್ರಶ್ನಿಸಿದರು.

ತನಿಖೆಯ ಭರವಸೆ ನೀಡಿದ ಜೆ.ಪಿ. ನಡ್ಡಾ:

ಖರ್ಗೆ ಅವರ ಆರೋಪಕ್ಕೆ ರಾಜ್ಯಸಭೆಯ ಸಭಾ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ತಕ್ಷಣವೇ ಪ್ರತಿಕ್ರಿಯಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. “ಖರ್ಗೆ ಅವರು ಹೇಳಿದ ಘಟನೆ ನಿಜಕ್ಕೂ ಅತ್ಯಂತ ದುಃಖಕರ. ಬಿಜೆಪಿ ಇಂತಹ ಯಾವುದೇ ಚಟುವಟಿಕೆಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಅಲ್ಲಿ ಏನು ನಡೆದಿದೆ ಎಂಬುದರ ಕುರಿತು ಪೂರ್ಣ ಪ್ರಮಾಣದ ತನಿಖೆ ನಡೆಸಲಾಗುವುದು. ಈ ಘಟನೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಅದಕ್ಕಾಗಿ ನಾವು ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ನಡ್ಡಾ ಸ್ಪಷ್ಟಪಡಿಸಿದ್ದಾರೆ.

ಘಟನೆಯ ಹಿನ್ನೆಲೆ:

ಆಗಸ್ಟ್ 8 ರಂದು ಖರ್ಗೆ ಅವರು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ‘ವಿಜಯ ಶಂಖನಾದ’ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಆಗಸ್ಟ್ 10 ರಂದು ‘ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ’ದ ಸದಸ್ಯರು ಆ ಸ್ಥಳದಲ್ಲಿ ಹವನ ನಡೆಸಿದ್ದರು. ರಾಮಲೀಲಾ ಮೈದಾನವನ್ನು ರಾಜಕೀಯ ಉದ್ದೇಶಗಳಿಗೆ ಬಳಸಲಾಗಿದೆ ಹಾಗೂ ರ‍್ಯಾಲಿಯಲ್ಲಿ ವಿವಾದಾತ್ಮಕ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಸಂಘಟನೆ ಪ್ರತಿಪಾದಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು