ಅಮಿತ್‌ ಶಾ ವಿರುದ್ಧ ಹೇಳಿಕೆ: ರಾಹುಲ್ ಗಾಂಧಿಗೆ ಲೋಕಸಭೆಯ ಸಮಿತಿಯಿಂದ ನೋಟಿಸ್, ಆಗಸ್ಟ್ 28ರೊಳಗೆ ಉತ್ತರಿಸಲು ಗಡುವು

ದೆಹಲಿ: ಸಂಸತ್ತಿನಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 28 ರೊಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಿದೆ.

ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಿದ್ದ ಹಕ್ಕುಚ್ಯುತಿ ಮತ್ತು ಸದನದ ಅವಹೇಳನ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಪೀಕರ್ ಅವರು ಈ ವಿಷಯವನ್ನು ಪರಿಶೀಲನೆಗಾಗಿ ವಿಶೇಷಾಧಿಕಾರ ಸಮಿತಿಗೆ ಒಪ್ಪಿಸಿದ್ದರು.

ನೋಟಿಸ್ ಜಾರಿಗೆ ಕಾರಣವೇನು?

ಜುಲೈ 30 ರಂದು ‘ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ತಿದ್ದುಪಡಿ ಮಸೂದೆ, 2026’ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಅವರು ಅಸಂಸದೀಯ ಹಾಗೂ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಮತ್ತು ನಿಯಮ 353 ರ ಅಡಿಯಲ್ಲಿ ಯಾವುದೇ ಪೂರ್ವ ಸೂಚನೆ ನೀಡದೆ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಸುಳ್ಳು ಹಾಗೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದರು.

ಸ್ಪೀಕರ್‌ಗೆ ಸಲ್ಲಿಸಿದ್ದ ಮೂರು ಪುಟಗಳ ಪತ್ರದಲ್ಲಿ ಅನುರಾಗ್ ಠಾಕೂರ್, “ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂಭಾಷಣೆಯನ್ನು ಪ್ರಸ್ತಾಪಿಸುವಾಗ ರಾಹುಲ್ ಗಾಂಧಿ ನಿಯಮ 352 ಅನ್ನು ಉಲ್ಲಂಘಿಸಿದ್ದಾರೆ. ಕೇಂದ್ರ ಗೃಹ ಸಚಿವರ ಮೇಲೆ ಆಧಾರರಹಿತ ಆರೋಪ ಹೊರಿಸಿ ಸದನದ ಘನತೆಗೆ ಧಕ್ಕೆ ತಂದಿದ್ದಾರೆ. ಈ ಕುರಿತು ವಿಸ್ತೃತ ತನಿಖೆ ನಡೆಸಿ, ಅವರು ಸದನ ಹಾಗೂ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಬೇಷರತ್ ಕ್ಷಮೆಯಾಚಿಸುವಂತೆ ನಿರ್ದೇಶಿಸಬೇಕು” ಎಂದು ಮನವಿ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು