ಆತ್ಮರಕ್ಷಣೆಯಲ್ಲಿ ಮೋದಿ-ಶಾ ಜೋಡಿ: ಸಂಸತ್ ಕಲಾಪದಿಂದ ದೂರವುಳಿದ ನಂ.1 ಮತ್ತು ನಂ.2 ನಾಯಕರು

ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನವು ಪೂರ್ಣಗೊಂಡಿದ್ದು, ಇಡೀ ಅಧಿವೇಶನದ ಬಹುತೇಕ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕಲಾಪದಿಂದ ದೂರವುಳಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿಗಳ ಹೋರಾಟ ಮತ್ತು ವಿರೋಧ ಪಕ್ಷಗಳ ಆಕ್ರಮಣಕಾರಿ ನಿಲುವಿಗೆ ಹೆದರಿ ಇಬ್ಬರೂ ನಾಯಕರು ಮುಖ ತೋರಿಸದೆ ಅಡಗಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಸರ್ಕಾರದ ಪ್ರತಿಯೊಂದು ಪ್ರಮುಖ ನಿರ್ಧಾರ ಹಾಗೂ ಸಮರ್ಥನೆಯಲ್ಲಿ ಮುಂಚೂಣಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಧ್ಯಮಗಳಿಗೆ ನೀಡಿದ ಸಣ್ಣ ಹೇಳಿಕೆಯನ್ನು ಹೊರತುಪಡಿಸಿ ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಸಕ್ರಿಯ ಪಾತ್ರ ವಹಿಸಲಿಲ್ಲ. ದೇಶದ ಪ್ರಮುಖ ನಾಯಕರಾದ ಮೋದಿ ಹಾಗೂ ಶಾ ಅವರು ವಿಪಕ್ಷಗಳು ಮತ್ತು ವಿದ್ಯಾರ್ಥಿ ಚಳವಳಿಯನ್ನು ಎದುರಿಸಲಾಗದೆ ಹಿನ್ನಡೆ ಅನುಭವಿಸಿದ ಬಗೆಯನ್ನು ಪತ್ರಕರ್ತೆ ಶ್ರವಸ್ತಿ ದಾಸ್‌ಗುಪ್ತಾ ‘ದಿ ವೈರ್’ ಜಾಲತಾಣದಲ್ಲಿ ಸುದೀರ್ಘವಾಗಿ ವಿಶ್ಲೇಷಿಸಿದ್ದಾರೆ.

ಅಧಿವೇಶನ ಆರಂಭಕ್ಕೂ ಮುನ್ನ, ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳು, ಟಿಎಂಸಿ, ಶಿವಸೇನೆ (ಯುಬಿಟಿ) ಹಾಗೂ ಆಮ್ ಆದ್ಮಿ ಪಕ್ಷಗಳಲ್ಲಿನ ಅಸಮಾಧಾನಿತ ಸಂಸದರ ಬೆಂಬಲ ಪಡೆದು ಮಹಿಳಾ ಮೀಸಲಾತಿ ಹಾಗೂ ಡಿಲಿಮಿಟೇಶನ್‌ಗೆ ಸಂಬಂಧಿಸಿದ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸುವ ಉತ್ಸಾಹದಲ್ಲಿ ಎನ್‌ಡಿಎ ಸರ್ಕಾರವಿತ್ತು. ಆದರೆ ವಾಸ್ತವ ಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು.

ಯುವಜನತೆ ಮತ್ತು ವಿದ್ಯಾರ್ಥಿಗಳ ತೀವ್ರ ಆಕ್ರೋಶಕ್ಕೆ ಮಣಿದ ಪ್ರಧಾನಿ ಮೋದಿ ಅವರು ತಮ್ಮ ಸಂಪುಟದ ಸಚಿವರೊಬ್ಬರನ್ನು ಅನಿವಾರ್ಯವಾಗಿ ಹುದ್ದೆಯಿಂದ ವಜಾಗೊಳಿಸಬೇಕಾಯಿತು. ಅಮಿತ್ ಶಾ ಸದನಕ್ಕೆ ಬಂದು ಉತ್ತರಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳು ನಿರಂತರವಾಗಿ ಕಲಾಪವನ್ನು ಸ್ಥಗಿತಗೊಳಿಸಿದವು. ಜುಲೈ 20 ರಿಂದ ಆಗಸ್ಟ್ 13 ರವರೆಗೆ ನಡೆದ ಅಧಿವೇಶನದ ಕೊನೆಯ ದಿನದಂದು ಮಾತ್ರ ಪ್ರಧಾನಿ ಮತ್ತು ಗೃಹ ಸಚಿವರು ಸಾಂಕೇತಿಕವಾಗಿ ಹಾಜರಾದರೂ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು. ಪ್ರಮುಖವಾದ ವಿದೇಶಿ ಕೊಡುಗೆ (ನಿಯಂತ್ರಣ) ಮಸೂದೆಯನ್ನೂ ವಿಪಕ್ಷಗಳು ತಡೆಹಿಡಿದ ಪರಿಣಾಮ, ಅದನ್ನು ಜಂಟಿ ಸಂಸದೀಯ ಸಮಿತಿಗೆ (JPC) ಕಳುಹಿಸಬೇಕಾಯಿತು.

Related Articles

ಇತ್ತೀಚಿನ ಸುದ್ದಿಗಳು