ಕರ್ನಾಟಕದಲ್ಲಿ H1N1 ಹಂದಿ ಜ್ವರ ಹೆಚ್ಚಳ: 4,200ಕ್ಕೂ ಹೆಚ್ಚು ಪ್ರಕರಣ ದಾಖಲು, ಆತಂಕ ಬೇಡ ಎಂದ ಆರೋಗ್ಯ ಇಲಾಖೆ

ಬೆಂಗಳೂರು: ಕರ್ನಾಟಕದಲ್ಲಿ ಕಾಲೋಚಿತ H1N1 (ಹಂದಿ ಜ್ವರ) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, 4,200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಆರೋಗ್ಯ ಇಲಾಖೆಯು ಅಗತ್ಯ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಜ್ಯದಲ್ಲಿ ಇತ್ತೀಚೆಗೆ H1N1 ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವುದು ಯಾವುದೇ ಅಸಹಜ ಪಿಡುಗಲ್ಲ, ಬದಲಿಗೆ ಮಾನ್ಸೂನ್ ಋತುವಿನಲ್ಲಿ ಕಂಡುಬರುವ ಸಾಮಾನ್ಯ ಹೆಚ್ಚಳ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಇನ್‌ಫ್ಲುಯೆಂಜಾ ಜ್ವರವು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ — ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಉಲ್ಬಣಗೊಳ್ಳುತ್ತದೆ.

ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಷನ್ ಪ್ಲಾಟ್‌ಫಾರ್ಮ್ (ಐಎಚ್‌ಐಪಿ) ದತ್ತಾಂಶದ ಪ್ರಕಾರ, ಆಗಸ್ಟ್ 22 ರವರೆಗೆ 32 ಜಿಲ್ಲೆಗಳಲ್ಲಿ ಪ್ರಯೋಗಾಲಯದಿಂದ ದೃಢಪಟ್ಟ 4,212 ಪ್ರಕರಣಗಳು ದಾಖಲಾಗಿದ್ದು, ಇದು 2025ರ (4,583) ಮತ್ತು 2024ರ (3,903) ವಾರ್ಷಿಕ ಅಂಕಿಅಂಶಗಳಿಗೆ ಅನುಗುಣವಾಗಿಯೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯ ನಂತರ, ರಾಜ್ಯದ ಆರೋಗ್ಯ ಮೂಲಸೌಕರ್ಯ ಮತ್ತು ಔಷಧಗಳ ದಾಸ್ತಾನು ಸಂಪೂರ್ಣ ಸಜ್ಜಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಐಸಿಎಂಆರ್-ಎನ್‌ಸಿಡಿಸಿ ನಿಗಾ ಕೇಂದ್ರಗಳು ಮತ್ತು ವೈರಲ್ ರಿಸರ್ಚ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಗಳ ಜಾಲದ ಮೂಲಕ ಇನ್‌ಫ್ಲುಯೆಂಜಾ ತರಹದ ಕಾಯಿಲೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸೋಂಕು (ಸಾರಿ) ಮೇಲ್ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಒಸೆಲ್ಟಾಮಿವಿರ್ (Oseltamivir) ಮಾತ್ರೆಗಳು, ಪಿಪಿಇ ಕಿಟ್‌ಗಳು ಮತ್ತು ಎನ್‌95 ಮಾಸ್ಕ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ರಾಜ್ಯದ ತಪಾಸಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪ್ರಕರಣಗಳನ್ನು ಕೇಂದ್ರ ಆರೋಗ್ಯ ಪೋರ್ಟಲ್‌ನಲ್ಲಿ ದಾಖಲಿಸಲು ಸೂಚಿಸಲಾಗಿದೆ.

ರೋಗಲಕ್ಷಣಗಳನ್ನು ಮೊದಲೇ ಪತ್ತೆಹಚ್ಚಿ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಅಪಾಯವನ್ನು ಗಣನೀಯವಾಗಿ ತಪ್ಪಿಸಬಹುದು, ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ಧೈರ್ಯ ತುಂಬಿದ್ದಾರೆ.

ಸೋಂಕು ಹರಡುವುದನ್ನು ತಡೆಯಲು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗಿಗೆ ಕರ್ಚೀಫ್ ಅಥವಾ ಮೊಣಕೈ ಅಡ್ಡಲಾಗಿ ಇಟ್ಟುಕೊಳ್ಳುವುದು, ಸಾಬೂನು ಮತ್ತು ನೀರಿನಿಂದ ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ರೋಗಲಕ್ಷಣಗಳು ಕಂಡುಬಂದರೆ ಮನೆಯಲ್ಲೇ ಪ್ರತ್ಯೇಕವಾಗಿ ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ.

ಅದೇ ರೀತಿ, ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇ ಪದೇ ಮುಟ್ಟಬಾರದು. ಅನಾರೋಗ್ಯವಿರುವಾಗ ಹಸ್ತಲಾಘವ ಮಾಡುವುದು ಮತ್ತು ಜನದಟ್ಟಣೆಯ ಪ್ರದೇಶಗಳಿಗೆ ತೆರಳುವುದನ್ನು ನಿಲ್ಲಿಸಬೇಕು. ಒಗೆಯದ ಬಟ್ಟೆಯ ನ್ಯಾಪ್‌ಕಿನ್ ಅಥವಾ ಕರವಸ್ತ್ರಗಳನ್ನು ಮರುಬಳಕೆ ಮಾಡಬಾರದು. ರೋಗಲಕ್ಷಣಗಳು ಮುಂದುವರಿದರೆ ತಕ್ಷಣವೇ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು