ರಾಜ್ಯಾದ್ಯಂತ 24 ಸಾವಿರಕ್ಕೂ ಹೆಚ್ಚು BPL ಕಾರ್ಡ್‌ಗಳ ಮೇಲೆ ಸಂದೇಹ – ಡಿಸಿಎಂ ಪರಮೇಶ್ವರ್

ಬೆಂಗಳೂರು : ಕರ್ನಾಟಕದಲ್ಲಿ ಅನರ್ಹರು ಮತ್ತು ಅಕ್ರಮವಾಗಿ ಬಿಪಿಎಲ್‌ (BPL Card) ಸೌಲಭ್ಯ ಪಡೆಯುತ್ತಿರುವವರನ್ನು ಪತ್ತೆ ಹಚ್ಚುವ ಕಾರ್ಯ ತೀವ್ರಗೊಂಡಿದ್ದು, ರಾಜ್ಯದಾದ್ಯಂತ ಒಟ್ಟು 24,315 ಬಿಪಿಎಲ್ ಕಾರ್ಡ್‌ ಫಲಾನುಭವಿಗಳನ್ನು ‘ಸಂದೇಹಾಸ್ಪದ’ ಪಟ್ಟಿಗೆ ಸೇರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ಅವರು ತಿಳಿಸಿದ್ದಾರೆ. ವಿಧಾನಸಭೆಯ (Vidhan Soudha)ಪ್ರಶ್ನೋತ್ತರ ಕಲಾಪದಲ್ಲಿ ಈ ಮಹತ್ವದ ಮಾಹಿತಿಯನ್ನು ಅವರು ಮಂಡಿಸಿದರು.

ಕಲಾಪದ ವೇಳೆ ವಿಪಕ್ಷ ಬಿಜೆಪಿಯ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ತೀವ್ರ ಧರಣಿ ನಡೆಸಿದ್ದರಿಂದ, ವಿರೋಧ ಪಕ್ಷಗಳ ಯಾವುದೇ ಸದಸ್ಯರು ಪ್ರಶ್ನೋತ್ತರ ಅವಧಿಯಲ್ಲಿ ಭಾಗವಹಿಸಿರಲಿಲ್ಲ. ಹೀಗಿದ್ದರೂ, ಪಟ್ಟಿಯಲ್ಲಿದ್ದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸರ್ಕಾರದ ಪರವಾಗಿ ಸಚಿವರು ಸುದೀರ್ಘ ಉತ್ತರ ನೀಡಿದರು.

5,607 ಫಲಾನುಭವಿಗಳಿಗೆ ಮಾಸಿಕ ಪಿಂಚಣಿ

ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, 2026ರ ಜುಲೈ ತಿಂಗಳ ಅಂತ್ಯದ ವೇಳೆಗೆ ಒಟ್ಟು 5,607 ಫಲಾನುಭವಿಗಳಿಗೆ ಮಾಸಿಕ ಪಿಂಚಣಿಯನ್ನು ಯಶಸ್ವಿಯಾಗಿ ಪಾವತಿಸಲಾಗಿದೆ. ಇದರ ಜೊತೆಗೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಾರ್ಷಿಕ ಆದಾಯದ ಮಿತಿಯನ್ನು ಪ್ರಸ್ತುತ ಇರುವ ಪ್ರಮಾಣದಿಂದ 32 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಕುರಿತಾದ ಮಹತ್ವದ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಅಂತಿಮ ಪರಿಶೀಲನೆಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಸಂದೇಹಾಸ್ಪದ ಬಿಪಿಎಲ್ ಪಡಿತರ ಚೀಟಿಗಳು ಹಾಗೂ ಪಿಂಚಣಿ ಪ್ರಕರಣಗಳ ಪರಿಶೀಲನೆ ಗ್ರಾಮೀಣ ಹಂತದಲ್ಲೇ ತೀವ್ರವಾಗಿ ನಡೆಯುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳ (VA) ಹಂತದಲ್ಲಿ ಒಟ್ಟು 23,671 ಪ್ರಕರಣಗಳನ್ನು ಕೂಲಂಕುಷವಾಗಿ ತನಿಖೆಗೊಳಪಡಿಸಲಾಗಿದೆ. ಈ ಪೈಕಿ ಅರ್ಹ ಕಂಡುಬಂದ 3,240 ಪ್ರಕರಣಗಳಲ್ಲಿ ಸೌಲಭ್ಯವನ್ನು ಮುಂದುವರಿಸಲಾಗಿದ್ದು, ನಿಯಮ ಬಾಹಿರವಾಗಿ ಸೌಲಭ್ಯ ಪಡೆಯುತ್ತಿದ್ದ 20,431 ಪ್ರಕರಣಗಳಲ್ಲಿ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪರಿಶೀಲನೆ ವೇಳೆ 3,816 ಫಲಾನುಭವಿಗಳು ನೀಡಿದ ವಿಳಾಸದಲ್ಲಿ ಲಭ್ಯವೇ ಇಲ್ಲದಿರುವುದು ಕಂಡುಬಂದಿದೆ.

ಇನ್ನು 14,493 ಫಲಾನುಭವಿಗಳು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಲು ಮುಂದೆ ಬಂದಿಲ್ಲ ಹಾಗೂ 595 ಜನರು ತಮ್ಮ ಆದಾಯ ಪ್ರಮಾಣಪತ್ರವನ್ನೇ ಒದಗಿಸಿಲ್ಲ ಎಂದು ಸಚಿವರು ವಿವರಿಸಿದರು. ತಹಸೀಲ್ದಾರ್ ಹಂತದ ಪರಿಶೀಲನೆಯಲ್ಲಿ 2,367 ಪ್ರಕರಣಗಳನ್ನು ಮಾನ್ಯ ಮಾಡಿ ಮುಂದುವರಿಸಲಾಗಿದ್ದರೆ, ಅನರ್ಹರೆಂದು ಸಾಬೀತಾದ 325 ಪ್ರಕರಣಗಳ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಸದ್ಯ ರಾಜ್ಯಾದ್ಯಂತ ಇನ್ನೂ 21,623 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.

ನಡೆಯುತ್ತಿದೆ ಕಟ್ಟುನಿಟ್ಟಿನ ತನಿಖೆ

ಕುಟುಂಬ ತಂತ್ರಾಂಶದ (Kutumba Data) ಸಮಗ್ರ ದತ್ತಾಂಶವನ್ನು ಬಳಸಿಕೊಂಡು ಅರ್ಹತಾ ಮಾನದಂಡಗಳನ್ನು ಮರುಪರಿಶೀಲಿಸಲಾಗುತ್ತಿದೆ. ಅರ್ಹತೆಯಿಲ್ಲದಿದ್ದರೂ ಪಿಂಚಣಿ ಮತ್ತು ಬಿಪಿಎಲ್ ಸೌಲಭ್ಯ ಪಡೆಯುತ್ತಿರುವ ಬಗ್ಗೆ ಸರ್ಕಾರಕ್ಕೆ ವ್ಯಾಪಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನೈಜ ಬಡವರಿಗೆ ಮಾತ್ರ ಸರ್ಕಾರದ ಯೋಜನೆಯ ಸೌಲಭ್ಯ ತಲುಪಬೇಕು ಎಂಬ ಉದ್ದೇಶದಿಂದ ಈ ಕಟ್ಟುನಿಟ್ಟಿನ ತನಿಖೆ ನಡೆಸಲಾಗುತ್ತಿದೆ ಎಂದು ಡಾ. ಜಿ. ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು