ಜಂಕ್ ಫುಡ್ ಮೇಲೆ ರೆಡ್ ಅಲರ್ಟ್ ಲೇಬಲ್ ವಿವಾದ: ಕೋಕಾಕೋಲಾ, ನೆಸ್ಲೆ ಪ್ರತಿರೋಧಕ್ಕೆ ಸುಪ್ರೀಂ ಕೋರ್ಟ್ ಗರಂ

ದೇಶದಲ್ಲಿ ಪ್ಯಾಕೇಜ್ಡ್ ಆಹಾರ ಪದಾರ್ಥಗಳು ಮತ್ತು ತಂಪು ಪಾನೀಯಗಳ (ಸೋಡಾ) ಮೇಲೆ ‘ರೆಡ್ ಫ್ಲ್ಯಾಗ್’ (ಕೆಂಪು ಬಣ್ಣದ ಎಚ್ಚರಿಕೆ) ಲೇಬಲ್‌ಗಳನ್ನು ಕಡ್ಡಾಯವಾಗಿ ಮುದ್ರಿಸಬೇಕೆಂಬ ಪ್ರಸ್ತಾವನೆಯನ್ನು ಪ್ರಮುಖ ಬಹುರಾಷ್ಟ್ರೀಯ ಆಹಾರ ಕಂಪನಿಗಳಾದ ಕೋಕಾಕೋಲಾ ಮತ್ತು ನೆಸ್ಲೆ ತೀವ್ರವಾಗಿ ವಿರೋಧಿಸುತ್ತಿವೆ. ಕಂಪನಿಗಳ ಈ ಪ್ರತಿರೋಧದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಕ್ಕರೆ ಪ್ರಮಾಣ ಅಧಿಕವಾಗಿದ್ದರೆ ಕೆಂಪು ಬಣ್ಣ ಹಾಗೂ ಕೊಬ್ಬಿನಾಂಶ ಕಡಿಮೆಯಿದ್ದರೆ ಹಸಿರು ಬಣ್ಣ ಮುಂತಾದ ‘ಕಲರ್ ಕೋಡಿಂಗ್’ ಎಚ್ಚರಿಕೆ ಲೇಬಲ್ ನಿಯಮವನ್ನು ಈಗಾಗಲೇ ವಿಶ್ವದ ಸುಮಾರು 20 ದೇಶಗಳು ಯಶಸ್ವಿಯಾಗಿ ಜಾರಿಗೆ ತಂದಿವೆ. ಉದಾಹರಣೆಗೆ, ಲಂಡನ್‌ನಲ್ಲಿ ಮಾರಾಟವಾಗುವ ‘ಫ್ಯಾಂಟಾ’ ಪಾನೀಯದಲ್ಲಿ 63 ಕ್ಯಾಲೊರಿಗಳಿದ್ದರೆ, ಭಾರತದಲ್ಲಿ ಮಾರಾಟವಾಗುವ ಅದೇ ಬ್ರ್ಯಾಂಡ್‌ನ ಪಾನೀಯದಲ್ಲಿ ಮೂರು ಪಟ್ಟು ಹೆಚ್ಚು ಸಕ್ಕರೆ ಅಂಶವಿರುತ್ತದೆ. ಯುರೋಪ್‌ನಲ್ಲಿ ಕೃತಕ ಬಣ್ಣಗಳ ಬಳಕೆಗೆ ಸಂಬಂಧಿಸಿದಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಎಚ್ಚರಿಕೆ ನೀಡುವುದು ಕಡ್ಡಾಯವಾಗಿದ್ದರೆ, ಭಾರತದಲ್ಲಿ ಕ್ಯಾನ್‌ಗಳ ಹಿಂಭಾಗದಲ್ಲಿ ಕೇವಲ ಸಣ್ಣ ಅಕ್ಷರಗಳಲ್ಲಿ ನಮೂದಿಸಲಾಗುತ್ತಿದೆ.

ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮುಂಭಾಗದಲ್ಲೇ ಪೌಷ್ಟಿಕಾಂಶದ ಎಚ್ಚರಿಕೆಗಳನ್ನು (Front-of-pack Warning Labels) ಕಡ್ಡಾಯಗೊಳಿಸುವ ನಿಯಮವನ್ನು ಆಹಾರ ಕಂಪನಿಗಳು ವಿರೋಧಿಸುತ್ತಿವೆ. ಭಾರತೀಯ ಆಹಾರ ಪದ್ಧತಿಯು ವಿಶಿಷ್ಟ ರುಚಿ ಮತ್ತು ಮಸಾಲೆಗಳನ್ನು ಒಳಗೊಂಡಿರುವುದರಿಂದ ಈ ಎಚ್ಚರಿಕೆ ಲೇಬಲ್‌ಗಳು ಸರಿಹೊಂದುವುದಿಲ್ಲ ಎಂದು ಕಂಪನಿಗಳು ವಾದಿಸುತ್ತಿವೆ. ಇದಕ್ಕೆ ಪೂರಕವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI), ಬಣ್ಣದ ಎಚ್ಚರಿಕೆಗಳ ಬದಲು ಕೇವಲ ಕಪ್ಪು-ಬಿಳುಪಿನ (ಬ್ಲ್ಯಾಕ್ & ವೈಟ್) ಕೋಷ್ಟಕದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ನಮೂದಿಸಲು ಪ್ರಸ್ತಾಪಿಸಿತ್ತು.

ಆದರೆ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಇಸ್ರೇಲ್ ಮಾದರಿಯ ಕೆಂಪು-ಹಸಿರು ಎಚ್ಚರಿಕೆ ವ್ಯವಸ್ಥೆಯನ್ನು ಪರಿಶೀಲಿಸುವಂತೆ ನಿಯಂತ್ರಣ ಪ್ರಾಧಿಕಾರಕ್ಕೆ ಈ ಹಿಂದೆ ಸೂಚಿಸಿತ್ತು. ಆದರೆ ಕಂಪನಿಗಳೊಂದಿಗಿನ ಸಭೆಯ ನಂತರ ಎಫ್‌ಎಸ್‌ಎಸ್‌ಎಐ ಈ ನಿರ್ಧಾರದಿಂದ ಹಿಂದೆ ಸರಿದು, ಅಂತರರಾಷ್ಟ್ರೀಯ ಗುಣಮಟ್ಟದ ಪ್ಯಾಕೇಜಿಂಗ್ ನಿಯಮಗಳನ್ನು ಪಾಲಿಸುವುದು ಕಷ್ಟಕರ ಎಂಬ ಉದ್ಯಮದ ವಾದವನ್ನು ಬೆಂಬಲಿಸಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ಭಾರತವು ತನ್ನ ಪ್ರಜೆಗಳ ಒಟ್ಟಾರೆ ಆರೋಗ್ಯದ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತದೆ ಎಂಬ ಸಂದೇಶ ಜಗತ್ತಿಗೆ ತಲುಪಬೇಕು ಎಂದು ಕಟುವಾಗಿ ಎಚ್ಚರಿಸಿದೆ.

Related Articles

ಇತ್ತೀಚಿನ ಸುದ್ದಿಗಳು