‘ಬಿಜೆಪಿ-ಜೆಡಿಎಸ್‌ನಿಂದ ಕಲಿಯುವ ಅಗತ್ಯ ನನಗಿಲ್ಲ’: ಕೆಪಿಎಸ್‌ಸಿ ವಿವಾದ ಕುರಿತು ಎಚ್‌ಡಿಕೆ, ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ವಿಚಾರದಲ್ಲಿ ತಮ್ಮ ರಾಜೀನಾಮೆಗೆ ಆಗ್ರಹಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ತಿರುಗೇಟು ನೀಡಿದ್ದಾರೆ. ತಮಗೆ ಬಿಜೆಪಿ ಅಥವಾ ಜೆಡಿಎಸ್‌ನಿಂದ ಪಾಠ ಕಲಿಯುವ ಯಾವುದೇ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಯೊಬ್ಬರು ತಲೆಮರೆಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಅಧಿಕಾರಿ ಓಡಿಹೋಗಿದ್ದಾನಾ ಅಥವಾ ನಮ್ಮ ವಶದಲ್ಲಿದ್ದಾನಾ ಎಂಬುದು ಇವರಿಗೆ ಗೊತ್ತಿದೆಯೇ? ಪ್ರತಿಯೊಂದು ವಿಚಾರವನ್ನು ಮಾಧ್ಯಮಗಳ ಮುಂದೆ ಅಥವಾ ಅವರಿಗೆ ಬಂದು ಹೇಳಲು ಸಾಧ್ಯವೇ? ಒಬ್ಬ ಅಧಿಕಾರಿ ಲಿಖಿತ ರೂಪದಲ್ಲಿ ರಜೆಗೆ ಅರ್ಜಿ ಸಲ್ಲಿಸಿದಾಗ ಸರ್ಕಾರ ಅದನ್ನು ನಂಬಬಾರದೇ? ಅವರ ರಜೆ ಅರ್ಜಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಇವೆ. ಅವರ ತಂದೆಯ ಆರೋಗ್ಯ ವಿಚಾರವಾಗಿ ಅವರು ಸುಳ್ಳು ಹೇಳಿದ್ದಾರೋ, ನಿಜ ಹೇಳಿದ್ದಾರೋ ಅವರು ವಾಪಸ್ ಕರ್ತವ್ಯಕ್ಕೆ ಬಂದಾಗ ವಿಚಾರಣೆ ನಡೆಸಲಾಗುವುದು. ಆ ಅಧಿಕಾರಿ ಎಲ್ಲಿದ್ದಾರೆ ಎಂಬ ಮಾಹಿತಿ ನನಗಿದೆ, ಅದನ್ನು ಕುಮಾರಸ್ವಾಮಿ ಅವರಿಗಾಗಲಿ ಅಥವಾ ಬಿಜೆಪಿಯವರಿಗಾಗಲಿ ತಿಳಿಸುವ ಅಗತ್ಯ ನನಗಿಲ್ಲ,” ಎಂದು ಹೇಳಿದರು.

ಕೆಪಿಎಸ್‌ಸಿ ವಿಚಾರವಾಗಿ ಮಾತನಾಡಲು ಬಿಜೆಪಿ ಮತ್ತು ಜೆಡಿಎಸ್‌ಗೆ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, “ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮತ್ತು ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಅವರ ಮನೆಯಲ್ಲಿ ದೇವೇಗೌಡರ ಅಥವಾ ಮೋದಿಯವರ ಫೋಟೋ ಬದಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಫೋಟೋ ಇದೆ ಎಂದು ಬಿಜೆಪಿ ಮಾಜಿ ಶಾಸಕರೇ ಹೇಳುತ್ತಿರುವುದು ನಿಜವಲ್ಲವೇ? ₹200 ಕೋಟಿ ನೀಡಿ ಅಧ್ಯಕ್ಷರಾದರು ಎಂದು ನಿಮ್ಮದೇ ಪಕ್ಷದ ನಾಯಕರು ಆರೋಪಿಸುತ್ತಿರುವ ಬಗ್ಗೆ ಮೊದಲು ಮಾತನಾಡಿ,” ಎಂದು ಸವಾಲು ಹಾಕಿದರು. ಅಲ್ಲದೆ, ಹಿಂದೆ ಆರ್‌ಎಸ್‌ಎಸ್‌ ಅನ್ನು ‘ವಿಷ ಸರ್ಪ’ ಎಂದಿದ್ದವರು ಅಧಿಕಾರದ ಕುರ್ಚಿ ಸಿಕ್ಕ ತಕ್ಷಣ ಬದಲಾಗಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಅವರು ವ್ಯಂಗ್ಯವಾಡಿದರು.

Related Articles

ಇತ್ತೀಚಿನ ಸುದ್ದಿಗಳು