ಡೇಟಿಂಗ್‌ ಆ್ಯಪ್‌ ದೋಖ ಯುವತಿ ನಂಬಿ ಹೋದ ಯುವಕನ – 3.70 ಲಕ್ಷ ಸುಲಿಗೆ

ಬೆಂಗಳೂರು: ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾದ ಯುವತಿಯೊಬ್ಬಳನ್ನು ನಂಬಿ ಪಬ್‌ಗೆ ತೆರಳಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ಅಪಹರಿಸಿ, ಕೊಲೆ ಬೆದರಿಕೆ ಹಾಕಿ ₹3.70 ಲಕ್ಷ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಬ್‌ಗೆ ಬರುವಂತೆ ಯುವತಿಗೆ ಆಹ್ವಾನ

ಚಂದಾಪುರ ನಿವಾಸಿಯಾಗಿರುವ ಯುವಕನಿಗೆ ಡೇಟಿಂಗ್‌ ಆ್ಯಪ್‌ ಮೂಲಕ ಯುವತಿಯ ಪರಿಚಯವಾಗಿತ್ತು. ಆ.19ರಂದು ರಾತ್ರಿ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಹುಲಿಮಂಗಲ ಮುಖ್ಯರಸ್ತೆಯಲ್ಲಿರುವ ಪಬ್‌ಗೆ ಬರುವಂತೆ ಯುವತಿ ತಿಳಿಸಿದ್ದಳು. ಅದರಂತೆ ರಾತ್ರಿ 9.45ರ ಸುಮಾರಿಗೆ ಯುವಕ ಪಬ್‌ ಬಳಿ ತೆರಳಿದ್ದಾನೆ. ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ಯುವತಿ, ಪೆಟ್ರೋಲ್‌ ಹಾಕಿಸಿಕೊಂಡು ಬರೋಣ ಎಂದು ಹೇಳಿ ಯುವಕನನ್ನು ಕಾರಿನಲ್ಲಿ ಕರೆದೊಯ್ದಿದ್ದಾಳೆ. ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ಕಾರು ನಿಲ್ಲಿಸಿ, ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಯುವತಿ ಕೆಳಗಿಳಿದಿದ್ದಾಳೆ ಎನ್ನಲಾಗಿದೆ.

ನಿರ್ಜನ ಪ್ರದೇಶದಲ್ಲಿ ಅಪಹರಣ

ಯುವತಿ ಕಾರಿನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ಯುವಕನಿಗೆ ಬೆದರಿಕೆ ಹಾಕಿ, ಅದೇ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ. ಬಳಿಕ ಮತ್ತೊಂದು ಕಾರಿನಲ್ಲಿ ಕೂರಿಸಿ ನಗರದ ವಿವಿಧೆಡೆ ಸುತ್ತಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಯುವಕನಿಗೆ ಕೊಲೆ ಬೆದರಿಕೆ ಹಾಕಿ ₹7 ಸಾವಿರ ನಗದು, ಡೆಬಿಟ್‌ ಕಾರ್ಡ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಕಿತ್ತುಕೊಂಡಿದ್ದಾರೆ. ನಂತರ ಎಟಿಎಂಗೆ ಕರೆದೊಯ್ದು ಪಿನ್‌ ಪಡೆದು ₹45 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಕ್ರೆಡಿಟ್‌ ಕಾರ್ಡ್‌ ಬಳಸಿ ಕಾರಿಗೆ ಪೆಟ್ರೋಲ್‌ ಹಾಕಿಸಿಕೊಂಡಿದ್ದು, ಬಳಿಕ ಕಾರ್ಡ್‌ನ ಪಾಸ್‌ವರ್ಡ್‌ ಬದಲಿಸಿ ₹3.20 ಲಕ್ಷವನ್ನು ಮತ್ತೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು