ಮುಂದಿನ ಎರಡು ತಿಂಗಳಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ: ಕಟ್ಟುನಿಟ್ಟಿನ ಸೂಚನೆ ನೀಡಿದ ಕೆ. ಎಂ. ಶಿವಲಿಂಗೇಗೌಡ

ಬೆಂಗಳೂರು, ಆ.31: ಮುಂದಿನ ಎರಡು ತಿಂಗಳೊಳಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣದ ಕಾಮಗಾರಿಯನ್ನು ಪೂರ್ಣಗೊಳಿಸಿ, ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಬೇಕು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅಬಕಾರಿ ಸಚಿವರು, ಹಾಸನ ಜಿಲ್ಲೆ ಉಸ್ತುವಾರಿ ಸಚಿವರೂ ಆಗಿರುವ ಕೆ.ಎಂ. ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಇಂದು ಹಾಸನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣ ಕಾಮಗಾರಿಯ ಪ್ರಗತಿ ಪರಿಶೀಲನೆಯ ಸಭೆ ನಡೆಯಿತು. ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ. ಎಸ್‌. ಲತಾಕುಮಾರಿ ಅವರು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯನ್ನು ಶೀಘ್ರದಲ್ಲೇ ಉದ್ಘಾಟಿಸಿ, ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡುವುದಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಮಾತು ನೀಡಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ. ಇದು ನಮ್ಮ ಸರ್ಕಾರದ ಪ್ರತಿಷ್ಠೆಯ ವಿಚಾರವಾಗಿದೆ. ಹಾಗಾಗಿ ಅಧಿಕಾರಿಗಳು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕು. ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಮಂಜೂರಾದ ಅನುದಾನಕ್ಕಿಂತ ಹೆಚ್ಚುವರಿಯಾಗಿ ಹಣ ಖರ್ಚಾಗಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನಸೆಳೆದಾಗ, ಹೆಚ್ಚುವರಿ ಮೊತ್ತವನ್ನು ಲೋಕೋಪಯೋಗಿ ಮತ್ತು ಕಂದಾಯ ಇಲಾಖೆಯಿಂದ ತಲಾ ಶೇ. 50ರಷ್ಟು ಭರಿಸುವಂತೆ ಸೂಚನೆ ನೀಡಿದರು. ತಕ್ಷಣ ಉಭಯ ಇಲಾಖೆಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಹೆಚ್ಚುವರಿ ಖರ್ಚಾಗಿರುವ ವೆಚ್ಚದ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಸ್ತುತ 2 ಮಹಡಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 3ನೇ ಮಹಡಿ ನಿರ್ಮಾಣಕ್ಕೆ ಸಂಬಂಧಿಸಿ ಕೆಲಸಗಳು ಪ್ರಗತಿಯಲ್ಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಸಚಿವರು, ಸ್ಥಳಕ್ಕೆ ಖುದ್ದು ಭೇಟಿನೀಡಿ ಪರಿಶೀಲನೆ ನಡೆಸುತ್ತೇನೆ. ಕಟ್ಟಡದ ಮೂರನೇ ಮಹಡಿಯ ಅಗತ್ಯತೆಯ ಹಾಗೂ ಮೂಲಭೂತ ಸೌಕರ್ಯಗಳ ಗುಣಮಟ್ಟದ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದರು.

ಹಾಸನಾಂಬ ಉತ್ಸವದ ಕುರಿತು ಮಾತನಾಡಿದ ಸಚಿವರು, ಹಿಂದಿನ ವರ್ಷಕ್ಕಿಂತಲೂ ಹೆಚ್ಚು ಅದ್ಧೂರಿಯಾಗಿ ಈ ಬಾರಿ ಉತ್ಸವವನ್ನು ನಡೆಸಲಾಗುವುದು ಎಂದರು.

ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಹಿರಿಯ ಇಂಜಿನಿಯರ್‌ಗಳು, ಗುತ್ತಿಗೆದಾರರು ಮತ್ತಿತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು