ರಾಮನಗರದಲ್ಲಿ ನಕಲಿ ನೋಟು ತಯಾರಿಕಾ ಜಾಲ ಪತ್ತೆ: ₹5 ಲಕ್ಷ ಮೌಲ್ಯದ ಅರ್ಧ ತಯಾರಾಗಿದ್ದ ನೋಟುಗಳು ಜಪ್ತಿ, ಏಳು ಮಂದಿ ಬಂಧನ

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲಾ (ರಾಮನಗರ) ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ನೋಟು ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ₹5 ಲಕ್ಷ ಮುಖಬೆಲೆಯ ಅರ್ಧ ತಯಾರಾಗಿದ್ದ ನಕಲಿ ನೋಟುಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಂಡು ಏಳು ಮಂದಿಯನ್ನು ಬಂಧಿಸಿದ್ದಾರೆ.

ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಮನೆಯೊಂದರಲ್ಲಿ ಈ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮನೆಯ ಮಾಲೀಕ ಸಂತೋಷ್, ಪ್ರಮುಖ ಆರೋಪಿ ಸಂಪತ್ ಸೇರಿದಂತೆ ಗೋವಿಂದರಾಜು, ರೇಣುಕಾರಾಜು, ರಾಜೇಶ್, ಶಿವರಾಜು ಮತ್ತು ಸತೀಶ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಕಮಿಷನ್ ಆಸೆಗೆ ಬಿದ್ದು ಸಂಪತ್ ಎಂಬಾತನಿಗೆ ನಕಲಿ ನೋಟು ಘಟಕ ಸ್ಥಾಪಿಸಲು ಸಂತೋಷ್ ತನ್ನ ಮನೆಯನ್ನು ಬಿಟ್ಟುಕೊಟ್ಟಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರೋಹನ್ ಜಗದೀಶ್ ತಿಳಿಸಿದ್ದಾರೆ.

ಈ ಘಟಕದಲ್ಲಿ ಪೂರ್ಣ ಪ್ರಮಾಣದ ನಕಲಿ ನೋಟುಗಳನ್ನು ಸಿದ್ಧಪಡಿಸುವ ಬದಲು, ಮುಂದಿನ ಹಂತದ ಮುದ್ರಣಕ್ಕೆ ಬೇಕಾದ ಅರೆ-ಸಿದ್ಧ ಕಚ್ಚಾ ಸಾಮಗ್ರಿಗಳನ್ನು ತಯಾರಿಸಲಾಗುತ್ತಿತ್ತು. ಬಿಳಿ ಕಾಗದದ ರೋಲ್‌ಗಳಿಗೆ ರಾಸಾಯನಿಕ ಲೇಪಿಸಿ ಹಳದಿ-ಕಂದು ಬಣ್ಣಕ್ಕೆ ತಿರುಗಿಸಿದ ನಂತರ, ಗಾಜಿನ ಹಲಗೆಗಳ ನಡುವೆ ಬಿಸಿಲಿನಲ್ಲಿ ಒಣಗಿಸಿ ನೋಟಿನ ಅಳತೆಗೆ ಕತ್ತರಿಸಿ ಬಂಡಲ್ ಮಾಡಲಾಗುತ್ತಿತ್ತು. ಇಂತಹ 10 ಬಂಡಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಲ್ಟ್ರಾವೈಲೆಟ್ (UV) ಬೆಳಕಿನಲ್ಲಿ ಪರೀಕ್ಷಿಸಿದಾಗ ಕರೆನ್ಸಿ ನೋಟುಗಳ ಗೆರೆಗಳು ಪತ್ತೆಯಾಗಿವೆ. ಈ ಜಾಲದ ಕಚ್ಚಾ ವಸ್ತುಗಳ ಪೂರೈಕೆದಾರರು ಹಾಗೂ ಮುಂದಿನ ಹಂತದ ಸಂಸ್ಕರಣಾ ಜಾಲದ ಪತ್ತೆಗೆ ತನಿಖೆ ಮುಂದುವರಿದಿದೆ.

Related Articles

ಇತ್ತೀಚಿನ ಸುದ್ದಿಗಳು